ಬಲೆಯ ದಾರದಲ್ಲಿ ಸಿಲುಕಿದ್ದ ನೀರು ಹಾವಿನ ರಕ್ಷಣೆ ಮಾಡಿದ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ
ಮುಂಡಗೋಡ: ಬಲೆಯ ದಾರವೊಂದು ಹೊಟ್ಟೆಯ ಭಾಗಕ್ಕೆ ಸುತ್ತಿಕೊಂಡು ಪ್ರಾಣಾಪಾಯದ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ ನೀರು ಹಾವನ್ನು ಉರಗ ರಕ್ಷಕ ಹಾಗೂ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರು ರಕ್ಷಿಸಿದ್ದಾರೆ.
ಸೆಪ್ಟೆಂಬರ್ 5ರಂದು ಮುಂಡಗೋಡ ತಾಲೂಕಿನ ಕಾತೂರ ವಲಯದ ಪಾಳಾ ಶಾಖೆಯ ರಾಮಾಪುರ ಪ್ಲಾಟ್ನಲ್ಲಿ ಮನೆಯೊಂದರ ಸಮೀಪ ಹಾವು ಬಲೆಯ ದಾರದಲ್ಲಿ ಸಿಲುಕಿರುವುದು ಕಂಡುಬಂದಿದೆ. ಹಾವಿನ ಹೊಟ್ಟೆಯ ಭಾಗಕ್ಕೆ ಬಲೆಯ ದಾರ ಸುತ್ತಿಕೊಂಡಿದ್ದರಿಂದ ಅದು ಹೊರಬರಲಾಗದೆ ಒದ್ದಾಡುತ್ತಿತ್ತು.
ಇದನ್ನು ಗಮನಿಸಿದ ಮನೆಯವರು ಕೂಡಲೇ ಉರಗ ರಕ್ಷಕರಾದ ಸುನೀಲ್ ಹೊನ್ನಾವರ ಅವರಿಗೆ ಮಾಹಿತಿ ನೀಡಿದ್ದಾರೆ. ಇಲಾಖೆಯ ವಿವಿಧ ಕೆಲಸಗಳ ಒತ್ತಡದ ನಡುವೆಯೂ ಸ್ಥಳಕ್ಕೆ ಆಗಮಿಸಿದ ಅವರು, ಹಾವಿನ ದೇಹಕ್ಕೆ ಸುತ್ತಿಕೊಂಡಿದ್ದ ಬಲೆಯ ದಾರವನ್ನು ಸುರಕ್ಷಿತವಾಗಿ ತೆಗೆದು ಹಾವನ್ನು ರಕ್ಷಿಸಿದ್ದಾರೆ.
ನಂತರ ಹಾವನ್ನು ಸುರಕ್ಷಿತವಾಗಿ ಸಮೀಪದ ಕಾಡಿನ ಪ್ರದೇಶಕ್ಕೆ ಬಿಡಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಾವುಗಳ ಕುರಿತು ಜಾಗೃತಿ ಮೂಡಿಸಿ, ಹಾವು ಕಂಡುಬಂದಾಗ ಆತಂಕಪಡದೆ, ಅವುಗಳನ್ನು ಹಿಡಿಯಲು ಅಥವಾ ಹಾನಿ ಮಾಡಲು ಮುಂದಾಗದೆ ಅರಣ್ಯ ಇಲಾಖೆ ಅಥವಾ ಉರಗ ರಕ್ಷಕರಿಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು.