ಯಲ್ಲಾಪುರ: ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ-52ರಲ್ಲಿ ಕಾರಿಗೆ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ನಡೆದಿದೆ.
ಸೆಪ್ಟೆಂಬರ್ 6ರಂದು ರಾತ್ರಿ 7ರಿಂದ 7.30ರ ನಡುವೆ ಈ ಅಪಘಾತ ಸಂಭವಿಸಿದೆ. ಹೊಸಪೇಟೆಯಿಂದ ಬಾಡಿಗೆ ಕಾರಿನಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಚಾಲಕ ಆಲಂಬಾಷಾ ಅವರು ಬಾದಾಮಿಗೆ ತೆರಳಿ, ಅಲ್ಲಿಂದ ಗೋಕರ್ಣದತ್ತ ಬರುತ್ತಿದ್ದರು. ಅರಬೈಲ್ ಘಟ್ಟದ ಸಮೀಪ ಕಾರು ಸಂಚರಿಸುತ್ತಿದ್ದ ವೇಳೆ ಹಿಂದಿನಿಂದ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬಂದ ಕೆಎ-01/ಎಎನ್-1281 ಸಂಖ್ಯೆಯ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಕಾರು ಮುಂದಕ್ಕೆ ಚಲಿಸಿ, ಮುಂದೆ ಸಾಗುತ್ತಿದ್ದ ಎಂಎಚ್-09/ಎಫ್‌ಎಲ್-5699 ಸಂಖ್ಯೆಯ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ತಕ್ಷಣ ಆಂಬುಲೆನ್ಸ್‌ಗೆ ಮಾಹಿತಿ ನೀಡಿದ್ದಾರೆ.
ಗಾಯಗೊಂಡ ಚಾಲಕ ಆಲಂಬಾಷಾ ಹಾಗೂ ಇಬ್ಬರು ಪ್ರಯಾಣಿಕರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಪರೀಕ್ಷಿಸಿದ ಬಳಿಕ ಇಬ್ಬರು ಪ್ರಯಾಣಿಕರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತರನ್ನು ಮಹಾರಾಷ್ಟ್ರದ ಪುಣೆ ಮೂಲದ ಮೃಣ್ಮಯಿ ರಾಜನ್ ಕುಲ್ತೆ (32) ಹಾಗೂ ಶರ್ಮಿಳಾ ರಾಜನ್ ಕುಲ್ತೆ (59) ಎಂದು ಗುರುತಿಸಲಾಗಿದೆ.
ಅಪಘಾತಕ್ಕೆ ಕೆಎ-01/ಎಎನ್-1281 ಸಂಖ್ಯೆಯ ಲಾರಿಯ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂದು ಆರೋಪಿಸಿ ಚಾಲಕ ಆಲಂಬಾಷಾ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ನಿರೀಕ್ಷಕ ಸುರೇಶ ಜಿ. ಕುಂಬಾರ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.