ಶಿರಸಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ, ಅರಣ್ಯ ಹಾಗೂ ಸರ್ಕಾರದ ಒಡೆತನ ಮತ್ತು ನಿಯಂತ್ರಣದಲ್ಲಿರುವ ಜಾಗಗಳಲ್ಲಿ ವಸತಿ ಉದ್ದೇಶಕ್ಕಾಗಿ ನೀಡಲಾಗಿರುವ ಗ್ರಾಮಠಾಣ ಹಾಗೂ ಮನೆ ನಂಬರ್‌ಗಳನ್ನು ರದ್ದುಪಡಿಸಿ ತೆರಿಗೆ ಆಕರಣೆ ಮಾಡಬಾರದು ಎಂಬ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ಧಾರ ಜನವಿರೋಧಿಯಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ನಿಡಗೋಡ ಆರೋಪಿಸಿದರು.
ನಗರದ ದೀನದಯಾಳ ಸಭಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಕ್ರಮಣದಲ್ಲಿರುವ ಮನೆಗಳಿಗೆ ಮನೆ ನಂಬರ್ ದೊರೆತಿರುವುದು ಅಲ್ಲಿನ ನಿವಾಸಿಗಳಿಗೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಪ್ರಮುಖ ಆಧಾರವಾಗಿದೆ. ಈ ದಾಖಲೆಗಳನ್ನು ರದ್ದುಗೊಳಿಸಿದರೆ ಪಡಿತರ ಚೀಟಿ, ವಿದ್ಯುತ್ ಸಂಪರ್ಕ, ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಹಾಗೂ ಆಸ್ತಿ ನೋಂದಣಿ ಸೇರಿದಂತೆ ಹಲವು ಸೌಲಭ್ಯಗಳಿಂದ ಜನರು ವಂಚಿತರಾಗುವ ಸಾಧ್ಯತೆಯಿದೆ ಎಂದರು.
ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವರ್ಷಗಳಿಂದ ಅರಣ್ಯ ಪ್ರದೇಶಗಳಲ್ಲಿ ವಾಸವಿದ್ದು, ಕೃಷಿ ಹಾಗೂ ಇತರ ಜೀವನೋಪಾಯ ಚಟುವಟಿಕೆಗಳನ್ನು ನಡೆಸುತ್ತಿರುವ ಜನರ ಬದುಕಿನ ಮೇಲೆ ಇಂತಹ ನಿರ್ಧಾರಗಳು ಪರಿಣಾಮ ಬೀರುತ್ತವೆ. ಜನರನ್ನು ಅವರ ವಾಸಸ್ಥಳದಿಂದ ಹೊರಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಈಶ್ವರ ಖಂಡ್ರೆ ಅವರು ಅರಣ್ಯ ಅತಿಕ್ರಮಣ ತೆರವುಗೊಳಿಸುವ ಕುರಿತು ಆದೇಶಗಳನ್ನು ಹೊರಡಿಸಿದ್ದರು. ಇದೀಗ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಸಂದರ್ಭದಲ್ಲಿಯೂ ಇಂತಹ ನಿರ್ಧಾರ ಕೈಗೊಂಡಿರುವುದು ಮಲೆನಾಡು ಮತ್ತು ಕರಾವಳಿ ಭಾಗದ ಬಡ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲಿದೆ ಎಂದು ಸದಾನಂದ ಭಟ್ಟ ಹೇಳಿದರು.
ಮಲೆನಾಡು ಮತ್ತು ಕರಾವಳಿ ಭಾಗದ ಜನರನ್ನು ಮಾತ್ರ ಗುರಿಯಾಗಿಸಿಕೊಂಡು ಇಂತಹ ಕ್ರಮ ಕೈಗೊಳ್ಳುವುದು ಸರಿಯಲ್ಲ. ಜನರ ವಸತಿ ಹಕ್ಕನ್ನು ಕಸಿದುಕೊಳ್ಳುವ ಹಾಗೂ ಅವರನ್ನು ಗ್ರಾಮ ಪಂಚಾಯಿತಿ ಮತ್ತು ನಗರಸಭೆಗಳ ದಾಖಲೆಗಳಿಂದ ಹೊರಗಿಡುವ ಪ್ರಯತ್ನ ಅಕ್ಷಮ್ಯ ಎಂದು ಅವರು ಟೀಕಿಸಿದರು.
ಬೃಹತ್ ಯೋಜನೆಗಳ ಹೆಸರಿನಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಜನರನ್ನು ಒಕ್ಕಲೆಬ್ಬಿಸುವ ಬದಲು, ಅವರ ಹಕ್ಕು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಗ್ರಾಮಠಾಣ ಹಾಗೂ ಮನೆ ನಂಬರ್‌ಗಳಿಗೆ ಸಂಬಂಧಿಸಿದ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಕಸ್ತೂರಿರಂಗನ್ ವರದಿ ಅನುಷ್ಠಾನದಲ್ಲಿಯೂ ಸ್ಥಳೀಯ ಜನರ ಬದುಕು ಮತ್ತು ಹಕ್ಕುಗಳನ್ನು ಪರಿಗಣಿಸಬೇಕು. ಸರ್ಕಾರ ತನ್ನ ಜನವಿರೋಧಿ ನಿರ್ಧಾರಗಳನ್ನು ಹಿಂಪಡೆಯದಿದ್ದರೆ ಬಿಜೆಪಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಸದಾನಂದ ಭಟ್ಟ ನಿಡಗೋಡ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿರಸಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಕಾರ್ಯದರ್ಶಿ ನಾಗರಾಜ ನಾಯ್ಕ, ತಾ.ಪಂ ಮಾಜಿ ಸದಸ್ಯ ನಾಗರಾಜ ಶೆಟ್ಟಿ, ಗ್ರಾ.ಪಂ ಒಕ್ಕೂಟದ ಮಾಜಿ ಅಧ್ಯಕ್ಷ ನವೀನ ಶೆಟ್ಟಿ ಚಿಪಗಿ, ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ, ಆರ್.ವಿ. ಹೆಗಡೆ ಚಿಪಗಿ, ಶ್ರೀರಾಮ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.