ಹೊನ್ನಾವರ: ಬಡಗಣಿ ಹೊಳೆಯಲ್ಲಿ ಕಾಲು ಜಾರಿ ನೀರಿನಲ್ಲಿ ಬಿದ್ದು ವ್ಯಕ್ತಿಯೊಬ್ಬರು ಮೃ_ತಪಟ್ಟಿರುವ ಘಟನೆ ಹೊನ್ನಾವರದಲ್ಲಿ ನಡೆದಿದೆ.
ಮೃ_ತರನ್ನು ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಪಾವಿನಕುರ್ವಾ ನಿವಾಸಿ ಗಜಾನನ ನಾಗಪ್ಪ ನಾಯ್ಕ (49) ಎಂದು ಗುರುತಿಸಲಾಗಿದೆ. ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಜಾನನ ನಾಯ್ಕ ಅವರು ತಮ್ಮ ಮನೆಯಲ್ಲಿ ವಾಸವಿರದೆ, ಊರಿನಲ್ಲಿ ಮದ್ಯ ಸೇವಿಸಿ, ಅಲ್ಲಿ-ಇಲ್ಲಿ ಊಟ ಮಾಡಿಕೊಂಡು, ಅಂಗಡಿ ಸೇರಿದಂತೆ ಸಿಕ್ಕ ಸ್ಥಳಗಳಲ್ಲಿ ಮಲಗುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸೆ. 6ರ ರಾತ್ರಿ 9 ಗಂಟೆಯಿಂದ ಸೆ. 7ರ ಬೆಳಿಗ್ಗೆ 8.45ರ ನಡುವಿನ ಅವಧಿಯಲ್ಲಿ ಗಜಾನನ ನಾಯ್ಕ ಅವರು ಬಹಿರ್ದೆಸೆಗೆ ಅಥವಾ ಇನ್ನಾವುದೋ ಕಾರಣಕ್ಕಾಗಿ ಬಡಗಣಿ ಹೊಳೆಗೆ ಇಳಿದಿದ್ದರು ಎನ್ನಲಾಗಿದೆ. ಈ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ಹೊಳೆಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಮೃತರ ಸಂಬಂಧಿ, ಹಳದಿಪುರದ ತಾರಿಬಾಗಿಲು ನಿವಾಸಿ ಪ್ರಸನ್ನ ಅನಂತ ನಾಯ್ಕ (25) ಹೊನ್ನಾವರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.