ಪಿಓಪಿ ಮೂರ್ತಿ, ಡಿಜೆ ಬ್ಯಾನ್ | ರಾತ್ರಿ 10ರ ಬಳಿಕ ಧ್ವನಿವರ್ಧಕಕ್ಕೂ ಬ್ರೇಕ್!
ಕಾರವಾರ: ಗಣೇಶ ಚತುರ್ಥಿ ಹಬ್ಬದ ಸಂಭ್ರಮಕ್ಕೆ ಜಿಲ್ಲೆ ಸಜ್ಜಾಗುತ್ತಿರುವ ಬೆನ್ನಲ್ಲೇ ಪರಿಸರ, ಶಬ್ದಮಾಲಿನ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಉತ್ತರ ಕನ್ನಡ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಗಳನ್ನು ಪ್ರಕಟಿಸಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ರಾತ್ರಿ 10 ಗಂಟೆಯ ಬಳಿಕ ಯಾವುದೇ ರೀತಿಯ ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ಹಾಗೂ ಪ್ಲಾಸ್ಟಿಕ್ ರಹಿತ ಅಲಂಕಾರಿಕ ವಸ್ತುಗಳನ್ನೇ ಬಳಸಬೇಕು ಎಂದು ಸೂಚಿಸಿದರು. ಧ್ವನಿವರ್ಧಕ ಬಳಸಲು ಪೊಲೀಸ್ ಇಲಾಖೆಯ ಅನುಮತಿ ಕಡ್ಡಾಯವಾಗಿದ್ದು, ವಸತಿ ಪ್ರದೇಶಗಳಲ್ಲಿ ಗರಿಷ್ಠ 55 ಡೆಸಿಬಲ್ ಹಾಗೂ ಶಾಲೆ, ಆಸ್ಪತ್ರೆ ಸೇರಿದಂತೆ ಸೂಕ್ಷ್ಮ ವಲಯಗಳಲ್ಲಿ 50 ಡೆಸಿಬಲ್ ಶಬ್ದಮಿತಿ ಪಾಲಿಸಬೇಕು ಎಂದರು.
ಸಾರ್ವಜನಿಕ ಗಣೇಶೋತ್ಸವ ಆಯೋಜಕರು ಅನುಮತಿಗಾಗಿ ವಿವಿಧ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಏಕಗವಾಕ್ಷಿ’ ವ್ಯವಸ್ಥೆ ಮಾಡಲಾಗಿದೆ. ಅಗತ್ಯವಿರುವ ವಿವಿಧ ಇಲಾಖೆಗಳ ನಿರಾಪೇಕ್ಷಣಾ ಪತ್ರಗಳನ್ನು ಇಲ್ಲಿಂದಲೇ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಒಟ್ಟು 1,492 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಮೆರವಣಿಗೆಗಳನ್ನು ಸೂಕ್ತ ಸ್ಥಳೀಯ ಅನುಮತಿ ಪಡೆದು ನಡೆಸುವಂತೆ ಸೂಚಿಸಲಾಗಿದೆ.
ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ವಿಸರ್ಜನಾ ಸ್ಥಳಗಳಲ್ಲಿ ಜೆಸಿಬಿ, ಅಗ್ನಿಶಾಮಕ ಸಿಬ್ಬಂದಿ, ಹೆಸ್ಕಾಂ ಸಿಬ್ಬಂದಿ ಹಾಗೂ ಪರಿಣಿತ ಈಜುಗಾರರನ್ನು ನಿಯೋಜಿಸಲಾಗುತ್ತಿದೆ. ಜಿಲ್ಲೆಯ 50ಕ್ಕೂ ಹೆಚ್ಚು ಅಧಿಕೃತ ಸ್ಥಳಗಳಲ್ಲಿ ಪಟಾಕಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಅಧಿಕೃತ ಮಳಿಗೆಗಳಿಂದ ಹಸಿರು ಪಟಾಕಿಗಳನ್ನಷ್ಟೇ ಖರೀದಿಸುವಂತೆ ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾತನಾಡಿ, ಹಬ್ಬದ ಸಂದರ್ಭದಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಕಳೆದ ಗಣೇಶೋತ್ಸವ ಹಾಗೂ ಮೆರವಣಿಗೆಗಳಲ್ಲಿ ಗಲಾಟೆ ಅಥವಾ ಅಶಾಂತಿ ಸೃಷ್ಟಿಸಿದ್ದವರ ವಿರುದ್ಧ ಮುನ್ನೆಚ್ಚರಿಕಾ ಕ್ರಮವಾಗಿ ಬಾಂಡ್‌ಓವರ್ ಮಾಡಲಾಗಿದೆ ಎಂದು ತಿಳಿಸಿದರು.
ಭಟ್ಕಳ ಉಪವಿಭಾಗದಲ್ಲಿ 392, ಕಾರವಾರ ಮತ್ತು ಅಂಕೋಲಾದಲ್ಲಿ 131, ಶಿರಸಿ ಉಪವಿಭಾಗದಲ್ಲಿ 668 ಹಾಗೂ ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾದಲ್ಲಿ 301 ಸೇರಿದಂತೆ ಒಟ್ಟು 1,492 ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ.
ಜಿಲ್ಲೆಯ ಸುಮಾರು ಶೇ.95ರಷ್ಟು ಗಣೇಶ ಮೂರ್ತಿಗಳು 11ನೇ ದಿನದೊಳಗೆ ವಿಸರ್ಜನೆಯಾಗಲಿದ್ದು, ಐದನೇ ದಿನ ಗರಿಷ್ಠ 449 ಹಾಗೂ 11ನೇ ದಿನ 143 ವಿಸರ್ಜನೆಗಳು ನಡೆಯಲಿವೆ. ಹೆಚ್ಚುವರಿ ಭದ್ರತೆಗಾಗಿ 400 ಗೃಹರಕ್ಷಕರು, 15 ಡಿಎಆರ್ ತುಕಡಿಗಳು ಹಾಗೂ ಕೆಎಸ್‌ಆರ್‌ಪಿ ತುಕಡಿಗಳನ್ನು ಅಗತ್ಯವಿರುವೆಡೆ ನಿಯೋಜಿಸಲಾಗುವುದು. ಧ್ವನಿಮಿತಿ ಉಲ್ಲಂಘನೆ ಕುರಿತು ದೂರು ಬಂದ ತಕ್ಷಣ ಪೊಲೀಸರು ಕ್ರಮ ಕೈಗೊಳ್ಳಲಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿಯೊಂದಿಗೆ ಸೇರಿ ಧ್ವನಿವರ್ಧಕಗಳ ಶಬ್ದಮಿತಿಯನ್ನೂ ತಪಾಸಣೆ ಮಾಡಲಿದ್ದಾರೆ.
ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸಲು ಅಗ್ನಿಶಾಮಕ ಹಾಗೂ ವೈದ್ಯಕೀಯ ಸಿಬ್ಬಂದಿ ಒಳಗೊಂಡ ಕ್ವಿಕ್ ರೆಸ್ಪಾನ್ಸ್ ಟೀಮ್ ಕೂಡ ಸಜ್ಜಾಗಿರಲಿದೆ. ಮೆರವಣಿಗೆಯಲ್ಲಿ ಡಿಜೆಗೆ ಬದಲಾಗಿ ಸ್ಥಳೀಯ ಕಲಾವಿದರು ಹಾಗೂ ಕಲಾತಂಡಗಳ ಮೂಲಕ ಜಿಲ್ಲೆಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಬಹುದಾಗಿದೆ ಎಂದು ಎಸ್ಪಿ ತಿಳಿಸಿದರು.
ಇದೇ ವೇಳೆ ಗಣಪತಿ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಅಗತ್ಯ ಭದ್ರತೆ ಒದಗಿಸುವುದರ ಜೊತೆಗೆ ಗುಂಡಿಗಳಿಂದ ಕೂಡಿರುವ ರಸ್ತೆಗಳನ್ನು ದುರಸ್ತಿ ಮಾಡಿಸುವಂತೆ ಆಯೋಜಕರು ಮನವಿ ಮಾಡಿದರು. ಅಗತ್ಯವಿರುವ ಕಡೆ ತಾತ್ಕಾಲಿಕ ರಸ್ತೆ ದುರಸ್ತಿ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.