Friday, July 24, 2026
Join WhatsApp Group
HomeInformationಬಾವಿಯಲ್ಲಿ ಬೈಕ್‌ ಓಡಿಸ್ತಾರೆ! ಇದ್ಯಾವ ಮ್ಯಾಜಿಕ್?!

ಬಾವಿಯಲ್ಲಿ ಬೈಕ್‌ ಓಡಿಸ್ತಾರೆ! ಇದ್ಯಾವ ಮ್ಯಾಜಿಕ್?!

ಈಗಂತೂ ಎಲ್ಲೆಡೆ ಜಾತ್ರೆಗಳ ಸಂಭ್ರಮ. ಒಂದೂರಿನಲ್ಲಿ ಮುಗಿಯುತ್ತಿದ್ದಂತೆಯೇ ಮತ್ತೊಂದು ಊರಲ್ಲಿ ಜಾತ್ರೆ. ಜಾತ್ರೆಯೆಂದರೆ ಕೇಳಬೇಕೇ! ಬಗೆಬಗೆಯ ಮನರಂಜನೆ. ಬಗೆಬಗೆಯ ಆಟಗಳು. ಒಂದೆಡೆ ನಾಟಕ, ಇನ್ನೊಂದೆಡೆ ಯಕ್ಷಗಾನ. ಅಲ್ಲೆಲ್ಲೋ ದೊಡ್ಡ ಬಯಲಿನಲ್ಲಿ ಅಮ್ಯೂಸ್‌ಮೆಂಟ್‌ಗಳ ಗದ್ದಲ. ಇಲ್ಲಿ ಗಮನ ಸೆಳೆಯುವುದು ಬಾವಿಯಲ್ಲಿ ಬೈಕ್‌ ಓಡಿಸುವುದು!

ಇದ್ಯಾವ ಮ್ಯಾಜಿಕ್‌ ಮಾಡಿ ಇಷ್ಟು ಸಲೀಸಾಗಿ ಬಾವಿಯಲ್ಲಿ ಬೈಕ್‌, ಕಾರ್‌ ಓಡಿಸುತ್ತಾರೆ ಎಂದು ನಾವೆಲ್ಲ ಅಚ್ಚರಿಪಡುತ್ತೇವೆ. ಆದರೆ, ಇದೇನೂ ರಾಕೆಟ್‌ ಸೈನ್ಸ್‌ ಅಲ್ಲ. ತೀರಾ ಚಿತ್ರಾನ್ನ ತಯಾರಿಸಿದಷ್ಟು ಸುಲಭವೂ ಅಲ್ಲ. ಹಾಗಾದರೆ, ಈ ಪ್ರದರ್ಶನದ ಹಿಂದಿರುವ ಲಾಜಿಕ್‌ ಏನೆಂಬುದನ್ನು ತಿಳಿಯೋಣವಾ?

ಬಾವಿಯಲ್ಲಿ ಬೈಕ್ ಓಡಿಸುವುದನ್ನು ಸಾಮಾನ್ಯವಾಗಿ ಮೌತ್ ಕಾ ಕುವಾನ್ (Maut Ka Kuan) ಅಥವಾ ಸಾವಿನ ಬಾವಿ (Well of Death) ಎಂದು ಕರೆಯಲಾಗುತ್ತದೆ. ಇದು ಭಾರತದಾದ್ಯಂತ ನಡೆಯುವ ಜಾತ್ರೆ, ಉತ್ಸವ,  ಪ್ರದರ್ಶನಗಳಲ್ಲಿ ಕಂಡುಬರುವ ಅತ್ಯಂತ ಸಾಹಸಮಯ ಕ್ರೀಡೆ. ಇದರ ಹಿಂದಿನ ತಾಂತ್ರಿಕ ಮತ್ತು ವೈಜ್ಞಾನಿಕ ವಿವರಗಳು ನಿಮಗೆ ಗೊತ್ತಾ?

ಇದೊಂದು ಸಾಹಸದ, ಮನೋರಂಜನೆಯ ಆಟವಷ್ಟೇ ಅಲ್ಲದೇ ಪ್ರಮುಖವಾಗಿ ಭೌತಶಾಸ್ತ್ರದ ಅದ್ಭುತ ನಿಯಮಗಳನ್ನೂ ಒಳಗೊಂಡಿದೆ. ಬೈಕ್ ಅಥವಾ ಕಾರ್ ಸವಾರರು ಲಂಬವಾದ (Vertical) ಗೋಡೆಯ ಮೇಲೆ ಬೀಳದಂತೆ ಓಡಿಸಲು ಪ್ರಮುಖವಾಗಿ ಕೇಂದ್ರಾಭಿಮುಖ ಬಲ, ಘರ್ಷಣಾ ಬಲ ಮತ್ತು ಗುರುತ್ವಾಕರ್ಷಣೆಯ ಶಕ್ತಿಗಳು ಕೆಲಸ ಮಾಡುತ್ತವೆ.

ಬೈಕ್ ವೇಗವಾಗಿ ವೃತ್ತಾಕಾರದಲ್ಲಿ ಚಲಿಸಿದಾಗ, ಬಾವಿಯ ಗೋಡೆಯು ಬೈಕ್‌ನ ಮೇಲೆ ಕೇಂದ್ರದ ಕಡೆಗೆ ಒತ್ತಡವನ್ನು ಹಾಕುತ್ತದೆ. ಇದನ್ನೇ ನಾವು ‘ನಾರ್ಮಲ್ ಫೋರ್ಸ್’ ಎನ್ನುತ್ತೇವೆ. ಬೈಕ್ ಸವಾರರು ಬಾವಿಯ ಗೋಡೆಯ ಮೇಲೆ ಕೆಳಕ್ಕೆ ಬೀಳದೆ ಓಡಿಸಲು ಕೇಂದ್ರಾಭಿಮುಖ ಬಲ (Centripetal Force) ಕಾರಣವಾಗಿರುತ್ತದೆ.

ಸವಾರರು ವೇಗವಾಗಿ ಚಲಿಸಿದಾಗ ಉಂಟಾಗುವ ಘರ್ಷಣೆಯು ಅವರನ್ನು ಗೋಡೆಗೆ ಅಂಟಿಕೊಂಡಿರುವಂತೆ ಮಾಡುತ್ತದೆ. ಟೈರ್ ಮತ್ತು ಮರದ ಗೋಡೆಯ ನಡುವಿನ ಘರ್ಷಣೆಯು ಬೈಕ್ ಕೆಳಕ್ಕೆ ಜಾರದಂತೆ ತಡೆಯುತ್ತದೆ. ಸವಾರನ ವೇಗ ಹೆಚ್ಚಾದಂತೆ ಈ ಘರ್ಷಣೆಯೂ ಹೆಚ್ಚಾಗುತ್ತದೆ. ಇಲ್ಲಿ ಘರ್ಷಣಾ ಬಲ ಕೆಲಸ ಮಾಡುತ್ತದೆ. ಗುರುತ್ವಾಕರ್ಷಣೆಯು ಸವಾರನನ್ನು ಕೆಳಕ್ಕೆ ಎಳೆಯಲು ಪ್ರಯತ್ನಿಸುತ್ತದೆ. ಆದರೆ ಬೈಕ್‌ನ ವೇಗದಿಂದ ಉಂಟಾಗುವ ಘರ್ಷಣೆಯು ಈ ಗುರುತ್ವಾಕರ್ಷಣೆಯನ್ನು ಸಮತೋಲನಗೊಳಿಸುತ್ತದೆ.

ಈ ಬಾವಿಯನ್ನು ಸಾಮಾನ್ಯವಾಗಿ ಸುಮಾರು 30ರಿಂದ 50 ಅಡಿ ವ್ಯಾಸದ ಸಿಲಿಂಡರ್ ಆಕಾರದಲ್ಲಿ ಗಟ್ಟಿಯಾದ ಮರದ ಹಲಗೆಗಳಿಂದ ಸುಮಾರು 15ರಿಂದ 25 ಅಡಿ ಎತ್ತರದಲ್ಲಿ ಬ್ಯಾರೆಲ್ ಆಕಾರದಲ್ಲಿ ನಿರ್ಮಿಸಲಾಗಿರುತ್ತದೆ.  ಸವಾರರು ಮೊದಲು ಬಾವಿಯ ತಳದಲ್ಲಿ ವೃತ್ತಾಕಾರದಲ್ಲಿ ಸುತ್ತುತ್ತಾ ವೇಗವನ್ನು ಹೆಚ್ಚಿಸಿಕೊಳ್ಳುತ್ತಾರೆ. ವೇಗವು ಮಿತಿ ದಾಟಿದಾಗ, ಕೇಂದ್ರಾಭಿಮುಖ ಬಲದ ಸಹಾಯದಿಂದ ಮೆಲ್ಲನೆ ಗೋಡೆಯ ಮೇಲೆ ಏರಲು ಪ್ರಾರಂಭಿಸುತ್ತಾರೆ. ಪೂರ್ಣ ವೇಗ ತಲುಪಿದ ಮೇಲೆ ಕೈ ಬಿಟ್ಟು ಓಡಿಸುವುದು, ಪ್ರೇಕ್ಷಕರಿಂದ ಹಣ ಪಡೆಯುವುದು ಅಥವಾ ಒಬ್ಬರನ್ನೊಬ್ಬರು ಹಿಂದಿಕ್ಕುವ ಸಾಹಸಗಳನ್ನು ಮಾಡುತ್ತಾರೆ.

ಸವಾರರು ಕೆಳಕ್ಕೆ ಬೀಳಬಾರದೆಂದರೆ ಒಂದು ನಿರ್ದಿಷ್ಟ ಕನಿಷ್ಠ ವೇಗವನ್ನು (Minimum Velocity) ಕಾಯ್ದುಕೊಳ್ಳುವುದು ಕಡ್ಡಾಯ. ವೇಗ ಕಡಿಮೆಯಾದಲ್ಲಿ ಬೈಕ್ ಕೆಳಕ್ಕೆ ಜಾರುತ್ತದೆ. ಇದು ಅತ್ಯಂತ ಅಪಾಯಕಾರಿ ಕೆಲಸವಾಗಿದ್ದು, ಸಣ್ಣ ತಪ್ಪು, ಯಾಂತ್ರಿಕ ದೋಷ, ಗಮನದ ಕೊರತೆ ಸಂಭವಿಸಿದರೂ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಇರುತ್ತದೆ.

ಸಾಮಾನ್ಯವಾಗಿ ಈ ಸಾಹಸಕ್ಕೆ ಹಗುರವಾದ ಬೈಕ್‌ಗಳನ್ನು ಬಳಸಲಾಗುತ್ತದೆ. ಮಾರುತಿ 800ನಂತಹ ಕಾರುಗಳನ್ನು ಸಹ ಬಳಸುವುದನ್ನು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಇಂತಹ ಸಾಹಸ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇವು ತರಬೇತಿ ಪಡೆದ ವೃತ್ತಿಪರರು ಮಾಡುವ ಸಾಹಸಗಳಾಗಿದ್ದು, ಯಾರೂ ಕೂಡ ಇದನ್ನು ಅನುಕರಿಸಲು ಅಥವಾ ಮನೆಯ ಬಳಿಯ ಬಾವಿಗಳಲ್ಲಿ ಪ್ರಯತ್ನಿಸಲು ಹೋಗಬೇಡಿ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share