ಯಲ್ಲಾಪುರ: ಅನ್ನಭಾಗ್ಯ ಯೋಜನೆಯಡಿ ಸರ್ಕಾರದಿಂದ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದರೆಂಬ ಆರೋಪದ ಮೇಲೆ ಯಲ್ಲಾಪುರ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, 15 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಯಲ್ಲಾಪುರ ಪಟ್ಟಣದ ನೂತನನಗರ ಜಡ್ಡಿಯ ಮಸೀದಿ ಸಮೀಪ ಸೆ.12ರಂದು ರಾತ್ರಿ ಈ ಕಾರ್ಯಾಚರಣೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಹಾಗೂ ಯಲ್ಲಾಪುರ ಪೊಲೀಸ್ ಠಾಣೆ ಸಿಬ್ಬಂದಿ ಜಂಟಿಯಾಗಿ ಪರಿಶೀಲನೆ ನಡೆಸಿದಾಗ ಟಾಟಾ ಇಂಟ್ರಾ ವಾಹನದಲ್ಲಿ 30 ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ಕಿ ಪತ್ತೆಯಾಗಿದೆ.
ವಶಪಡಿಸಿಕೊಂಡ ಅಕ್ಕಿಯ ಒಟ್ಟು ತೂಕ 1,500 ಕೆ.ಜಿ. (15 ಕ್ವಿಂಟಲ್) ಆಗಿದ್ದು, ಇದರ ಮೌಲ್ಯ ಸುಮಾರು ₹51,000 ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಕ್ಕಿಯನ್ನು ಪರಿಶೀಲಿಸಿದ ಆಹಾರ ನಿರೀಕ್ಷಕ ರಾಘವೇಂದ್ರ ರಾಮಾ ಗೌಡ ಅವರು ಇದು ಅನ್ನಭಾಗ್ಯ ಯೋಜನೆಯ ಸರ್ಕಾರಿ ಪಡಿತರ ಅಕ್ಕಿ ಎಂದು ಖಚಿತಪಡಿಸಿಕೊಂಡಿದ್ದಾರೆ.
ಈ ಸಂಬಂಧ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಾಂಧಿನಗರ ನಿವಾಸಿ, ಚಾಲಕ ಶಾರೂಕ್ ನಜೀರ ಅಹಮ್ಮದ ನೇಸರಗಿ (31) ಹಾಗೂ ಕಲಘಟಗಿ ನಿವಾಸಿ ಶಾನು ರೇಹಮಾನ ಯಾದವಾಡ (30) ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955ರ ಕಲಂ 3 ಮತ್ತು 7ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಆರೋಪಿಗಳು ಯಾವುದೇ ಸಂಬಂಧಪಟ್ಟ ಇಲಾಖೆ ಅಥವಾ ಪ್ರಾಧಿಕಾರದಿಂದ ಪರವಾನಗಿ ಪಡೆಯದೆ, ಯಲ್ಲಾಪುರ ತಾಲೂಕಿನ ನೂತನನಗರ ಜಡ್ಡಿ ಭಾಗದ ಸಾರ್ವಜನಿಕರಿಂದ ಅನ್ನಭಾಗ್ಯ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಸಾಗಿಸುತ್ತಿದ್ದರು ಎನ್ನಲಾಗಿದೆ.
ಅಕ್ಕಿಯನ್ನು ಸಾಗಿಸುತ್ತಿದ್ದ KA-25/AC-4832 ನೋಂದಣಿ ಸಂಖ್ಯೆಯ ಟಾಟಾ ಇಂಟ್ರಾ ವಾಹನವನ್ನು ಕೂಡ ವಶಕ್ಕೆ ಪಡೆಯಲಾಗಿದೆ. ವಾಹನದ ಅಂದಾಜು ಮೌಲ್ಯ ₹2 ಲಕ್ಷ ಎಂದು ದಾಖಲಿಸಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಪಿಎಸ್‌ಐ ಮಹಾವೀರ ಕಾಂಬಳೆ ನಡೆಸುತ್ತಿದ್ದಾರೆ.