Ad
Home Crime ವಾಹನ ಸಾಲ: ಶ್ರೀರಾಮ್ ಫೈನಾನ್ಸ್ ಗೆ ಮೋಸ

ವಾಹನ ಸಾಲ: ಶ್ರೀರಾಮ್ ಫೈನಾನ್ಸ್ ಗೆ ಮೋಸ

0
5

ಕುಮಟಾ: ವಾಹನ ಖರೀದಿಗೆ ಹಣಕಾಸು ಸಂಸ್ಥೆಯಿಂದ ₹7 ಲಕ್ಷ ಸಾಲ ಪಡೆದು, ಸಾಲದ ಕಂತುಗಳನ್ನು ಸರಿಯಾಗಿ ಪಾವತಿಸದೆ ವಾಹನವನ್ನು ಮರೆಮಾಚಿ ಅದರ ಸ್ಥಳ ಬದಲಾಯಿಸಿದ ಆರೋಪದಡಿ ಕುಮಟಾ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

 ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ಕುಮಟಾ ಶಾಖೆಯ ಅಸಿಸ್ಟಂಟ್ ಬಿಸಿನೆಸ್ ಮ್ಯಾನೇಜರ್ ಕೃಷ್ಣ ಸುಕ್ರು ಹರಿಕಂತ್ರ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, 2025ರ ಸೆಪ್ಟೆಂಬರ್ 30ರಂದು ನಾಡುಮಾಸ್ಕೇರಿ ಗ್ರಾಮದ ಗಂಗಾವಳಿಯ ಮಹಮ್ಮದ್ ಜುನೇದ್ ಅಬ್ದುಲ್ ಖಾದರ್ ಸಾಬ್ ಎಂಬುವವರು ಫೋರ್ಸ್ ಟೆಂಪೋ ಟ್ರಾವೆಲರ್ (KA-01/AF-2334) ಖರೀದಿಸಲು ಶ್ರೀರಾಮ್ ಫೈನಾನ್ಸ್ ಸಂಸ್ಥೆಯಿಂದ ₹7 ಲಕ್ಷ ಸಾಲ ಪಡೆದಿದ್ದರು. ಈ ಸಾಲಕ್ಕೆ ಅದೇ ಗ್ರಾಮದ ಸಂತೋಷ ಗೋವಿಂದ ನಾಯ್ಕ್ ಜಾಮೀನುದಾರರಾಗಿದ್ದರು ಎನ್ನಲಾಗಿದೆ.

ಸಾಲ ಪಡೆಯುವ ಸಂದರ್ಭದಲ್ಲಿ ಲೋನ್ ಕಮ್ ಹೈಪೋಥಿಕೇಶನ್ ಒಪ್ಪಂದ ಮಾಡಿಕೊಂಡಿದ್ದು, ವಾಹನದ ಆರ್‌ಸಿ ದಾಖಲೆಯಲ್ಲಿ ಹಣಕಾಸು ಸಂಸ್ಥೆಯ ಹೈಪೋಥಿಕೇಶನ್ ನಮೂದಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆದರೆ ಸಾಲದ ಕಂತುಗಳನ್ನು ಸರಿಯಾಗಿ ಪಾವತಿಸದ ಹಿನ್ನೆಲೆಯಲ್ಲಿ ಸಂಸ್ಥೆ ವಸೂಲಾತಿ ಕ್ರಮ ಕೈಗೊಂಡು ವಾಹನವನ್ನು ಮರುಸ್ವಾಧೀನಪಡಿಸಿಕೊಳ್ಳಲು ಮುಂದಾದಾಗ, ಆರೋಪಿತರು ವಾಹನವನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ ಅದರ ಸ್ಥಳವನ್ನು ಬದಲಾಯಿಸಿರುವುದು ಪತ್ತೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದರಿಂದ ಹಣಕಾಸು ಸಂಸ್ಥೆಗೆ ವಾಹನವನ್ನು ಪತ್ತೆಹಚ್ಚಿ ಮರುಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗದಂತೆ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಇದಲ್ಲದೆ, ವಸೂಲಾತಿಗಾಗಿ ಸಂಸ್ಥೆಯ ಸಿಬ್ಬಂದಿ ತೆರಳಿದ ಸಂದರ್ಭದಲ್ಲಿ ನಿಂದಿಸಿ, ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪವನ್ನೂ ದೂರಿನಲ್ಲಿ ಮಾಡಲಾಗಿದೆ. ನ್ಯಾಯಾಲಯದಿಂದ ತನಿಖೆಗಾಗಿ ಬಂದ ಖಾಸಗಿ ದೂರಿನ ಆಧಾರದ ಮೇಲೆ ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!