ರೈತರಿಗೆ ಜ್ಞಾನ, ತಂತ್ರಜ್ಞಾನ ಮತ್ತು ಹೊಸ ಅವಕಾಶಗಳ ಸಂಗಮ
ಕಾರವಾರ: ಕೃಷಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ, ಹೊಸ ಬೆಳೆ ಪದ್ಧತಿ, ನೈಸರ್ಗಿಕ ಕೃಷಿ, ಯಂತ್ರೋಪಕರಣಗಳು, ಮೌಲ್ಯವರ್ಧನೆ ಸೇರಿದಂತೆ ರೈತರಿಗೆ ಬೇಕಾದ ಹಲವು ವಿಷಯಗಳನ್ನು ಒಂದೇ ಕಡೆ ತಿಳಿದುಕೊಳ್ಳುವ ಅವಕಾಶ ಮತ್ತೆ ಬಂದಿದೆ. ಕೃಷಿಕರ ಪಾಲಿಗೆ ಜ್ಞಾನದ ಬುತ್ತಿ ತೆರೆದಿಡುವ ಧಾರವಾಡ ಕೃಷಿ ಮೇಳ-2026 ಸೆಪ್ಟೆಂಬರ್ 25ರಿಂದ 28ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.
“ಸಶಕ್ತ ಮಹಿಳೆ–ಸುಸ್ಥಿರ ಕೃಷಿ” ಎಂಬ ಘೋಷವಾಕ್ಯದೊಂದಿಗೆ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ವತಿಯಿಂದ ಆಯೋಜಿಸಲಾಗುತ್ತಿರುವ ಈ ಕೃಷಿ ಮೇಳದಲ್ಲಿ ಸುಮಾರು 20 ಲಕ್ಷ ರೈತರು, ರೈತ ಮಹಿಳೆಯರು, ವಿಸ್ತರಣಾ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಯುವಕ-ಯುವತಿಯರು ಭಾಗವಹಿಸುವ ನಿರೀಕ್ಷೆ ಇದೆ.
ಈ ಬಾರಿಯ ಕೃಷಿ ಮೇಳದಲ್ಲಿ ಕೇವಲ ಬೆಳೆಗಳ ಬಗ್ಗೆ ಮಾಹಿತಿ ನೀಡುವುದಷ್ಟೇ ಅಲ್ಲ, ಕೃಷಿಯನ್ನು ಹೆಚ್ಚು ಲಾಭದಾಯಕ ಹಾಗೂ ಸುಸ್ಥಿರವಾಗಿಸಿಕೊಳ್ಳಲು ಅಗತ್ಯವಾದ ಹಲವು ಹೊಸ ವಿಚಾರಗಳನ್ನು ಪರಿಚಯಿಸಲಾಗುತ್ತಿದೆ. ಸುಸ್ಥಿರ ಕೃಷಿಗೆ ಪೂರಕವಾದ ತಂತ್ರಜ್ಞಾನಗಳು, ಬೀಜ ಮೇಳ, ನೈಸರ್ಗಿಕ ಮತ್ತು ಸಾವಯವ ಕೃಷಿ, ಸಮಗ್ರ ಬೆಳೆ-ಪೋಷಕಾಂಶ ಹಾಗೂ ಪೀಡೆ ನಿರ್ವಹಣೆ, ಹಿಂಗಾರು ಬೆಳೆಗಳ ತಾಂತ್ರಿಕತೆ, ಹೈಟೆಕ್ ತೋಟಗಾರಿಕೆ, ಫಲ-ಪುಷ್ಪ ಪ್ರದರ್ಶನ ಸೇರಿದಂತೆ ಹಲವು ವಿಭಾಗಗಳು ರೈತರ ಗಮನ ಸೆಳೆಯಲಿವೆ.
ಕೃಷಿಯಲ್ಲಿ ಡ್ರೋನ್ ಬಳಕೆ, ಸುಧಾರಿತ ಕೃಷಿ ಯಂತ್ರೋಪಕರಣಗಳು, ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ಕೃಷಿ ಅರಣ್ಯ, ಪಶುಸಂಗೋಪನೆ, ಜಾನುವಾರುಗಳ ಪ್ರದರ್ಶನ ಹಾಗೂ ಮೇವಿನ ಬೆಳೆಗಳ ತಾಂತ್ರಿಕತೆಗಳ ಬಗ್ಗೆಯೂ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ದೊರೆಯಲಿದೆ. ರೈತರು ತಮ್ಮ ಅನುಭವ ಮತ್ತು ಆವಿಷ್ಕಾರಗಳನ್ನು ಹಂಚಿಕೊಳ್ಳಲು, ವಿಶೇಷ ಸಾಧನೆ ಮಾಡಿದ ರೈತರು ಹಾಗೂ ರೈತ ಮಹಿಳೆಯರೊಂದಿಗೆ ಸಂವಾದ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಮಹಿಳೆಯರ ಸ್ವಸಹಾಯ ಗುಂಪುಗಳ ಸಾಧನೆಗಳು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಸಂಸ್ಕರಣೆ, ಕೃಷಿ ನವೋದ್ಯಮಗಳು ಹಾಗೂ ಸಮುದಾಯ ವಿಜ್ಞಾನ ತಂತ್ರಜ್ಞಾನಗಳಿಗೂ ಮೇಳದಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಹೀಗಾಗಿ ಕೃಷಿಯನ್ನು ಕೇವಲ ಉತ್ಪಾದನೆಯಷ್ಟಕ್ಕೆ ಸೀಮಿತಗೊಳಿಸದೆ, ಉತ್ಪನ್ನಕ್ಕೆ ಹೆಚ್ಚಿನ ಮೌಲ್ಯ ಪಡೆಯುವ ಮಾರ್ಗಗಳನ್ನೂ ರೈತರು ತಿಳಿದುಕೊಳ್ಳಬಹುದಾಗಿದೆ.
ಇದರ ಜೊತೆಗೆ ಡಾ. ಚೆನ್ನವೀರ ಕಣವಿ ಕೃಷಿ ಲೇಖನ ಪ್ರಶಸ್ತಿ, ಕನ್ನಡ ಕೃಷಿ ಗೋಷ್ಠಿ ಹಾಗೂ ಮಹಿಳೆಯರು ಮತ್ತು ಮಕ್ಕಳಿಗಾಗಿ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕೃಷಿ ವಿಜ್ಞಾನವನ್ನು ಮಕ್ಕಳಿಗೂ ಪರಿಚಯಿಸುವ ಉದ್ದೇಶದಿಂದ ವಿಸ್ಮಯಕಾರಿ ಕೀಟ ಪ್ರಪಂಚ ಸೇರಿದಂತೆ ಹಲವು ವಿಶೇಷ ಪ್ರದರ್ಶನಗಳನ್ನೂ ಏರ್ಪಡಿಸಲಾಗುತ್ತಿದೆ.
ಕೃಷಿ ವಸ್ತು ಪ್ರದರ್ಶನದಲ್ಲಿ ಹೈಟೆಕ್ ಮಳಿಗೆಗಳು, ಸಾಮಾನ್ಯ ಮಳಿಗೆಗಳು, ಕೃಷಿ ಯಂತ್ರೋಪಕರಣಗಳ ಮಳಿಗೆಗಳು, ಆಹಾರ ಮಳಿಗೆಗಳು, ಜಾನುವಾರು ಪ್ರದರ್ಶನ ಮಳಿಗೆಗಳು ಹಾಗೂ ಕ್ಷೇತ್ರ ಮಳಿಗೆಗಳ ವ್ಯವಸ್ಥೆ ಇರಲಿದೆ. ಮಳಿಗೆ ಕಾಯ್ದಿರಿಸಲು 8277478507, 0836-2214497 ಸಂಖ್ಯೆಗೆ ಸಂಪರ್ಕಿಸಬಹುದು. ಕೃಷಿ ವಿಶ್ವವಿದ್ಯಾಲಯದ uasd.edu ಜಾಲತಾಣದ ಮೂಲಕವೂ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ನಾಲ್ಕು ದಿನಗಳ ಈ ಕೃಷಿ ಮೇಳ ರೈತರಿಗೆ ಹೊಸ ತಂತ್ರಜ್ಞಾನಗಳನ್ನು ಕಣ್ಣಾರೆ ನೋಡುವ, ತಜ್ಞರೊಂದಿಗೆ ಚರ್ಚಿಸುವ, ಇತರ ರೈತರ ಅನುಭವ ತಿಳಿದುಕೊಳ್ಳುವ ಹಾಗೂ ಕೃಷಿಯಲ್ಲಿ ಹೊಸ ಸಾಧ್ಯತೆಗಳನ್ನು ಅರಿಯುವ ವೇದಿಕೆಯಾಗಲಿದೆ ಎಂದು ಕೃಷಿಮೇಳದ ಪ್ರಚಾರ ಸಮಿತಿ ಹಾಗೂ ಅಧ್ಯಕ್ಷೆ ಮೌನೇಶ್ವರಿ ಕಮ್ಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.