ಯಲ್ಲಾಪುರ: ರೈತರಿಗೆ ವಿವಿಧ ಸೌಲಭ್ಯ ಹಾಗೂ ರಿಯಾಯಿತಿಗಳನ್ನ ನೀಡಿಯೂ ಯಲ್ಲಾಪುರ ತಾಲೂಕು ಮಾರ್ಕೆಟಿಂಗ್ ಸೊಸೈಟಿ (ಟಿಎಂಎಸ್) ಕಳೆದ ಆರ್ಥಿಕ ವರ್ಷದಲ್ಲಿ ರೂ.2.5 ಕೋಟಿಗೂ ಅಧಿಕ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ತಿಳಿಸಿದ್ದಾರೆ.
ಸೋಮವಾರ ಟಿಎಂಎಸ್ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪ್ರೇರಿತ ಪ್ರಕರಣದಿಂದಾಗಿ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಮೂರನೇ ಅವಧಿಗೆ ಆಡಳಿತ ವಹಿಸಿಕೊಳ್ಳುವುದು ಒಂಬತ್ತು ತಿಂಗಳು ವಿಳಂಬವಾಯಿತು. ಈ ಕಾರಣದಿಂದ ಸಂಸ್ಥೆಯ ಅಡಿಕೆ ಮಾರಾಟದ ಮೇಲೂ ಪರಿಣಾಮ ಬೀರಿದ್ದು, ನಿರೀಕ್ಷಿಸಿದ್ದ 52 ಸಾವಿರ ಕ್ವಿಂಟಲ್ ಬದಲಿಗೆ 48 ಸಾವಿರ ಕ್ವಿಂಟಲ್ ಅಡಿಕೆ ಮಾರಾಟವಾಗಿದೆ ಎಂದು ಹೇಳಿದರು.
ಅಡಿಕೆ ವಿಕ್ರಿಯಲ್ಲಿ ಟಿಎಂಎಸ್ ತಾಲೂಕಿನಲ್ಲಿ ಮೊದಲ ಸ್ಥಾನದಲ್ಲಿದ್ದು, ರೈತರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹಲವು ಸೌಲಭ್ಯ ಮತ್ತು ರಿಯಾಯಿತಿಗಳನ್ನು ನೀಡಿದ ಬಳಿಕವೂ ರೂ.2.5 ಕೋಟಿಗೂ ಅಧಿಕ ಲಾಭ ಗಳಿಸಿರುವುದು ಸಂಸ್ಥೆಯ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಎನ್.ಕೆ. ಭಟ್ಟ ಹೇಳಿದರು.
ಸಂಸ್ಥೆಯ ಶೇರುದಾರರಿಗೆ ಶೇ.15ರಷ್ಟು ಡಿವಿಡೆಂಡ್ ಘೋಷಿಸಲಾಗಿದೆ. ಸಾಲದ ಬಡ್ಡಿಯಲ್ಲಿ ಶೇ.1ರಷ್ಟು ರಿಯಾಯಿತಿ ಮೂಲಕ ರೂ.11.84 ಲಕ್ಷ, ಅಡಿಕೆ ವಿಕ್ರಿಗೆ ನೀಡಿದ ರಿಬೇಟ್ ರೂ.65.24 ಲಕ್ಷ, ಸಾಗಾಣಿಕೆ ವೆಚ್ಚ ರೂ.13.64 ಲಕ್ಷ, ಹಮಾಲಿ ವೆಚ್ಚ ರೂ.4.30 ಲಕ್ಷ, ಸೂಪರ್ ಮಾರ್ಕೆಟ್ ರಿಬೇಟ್ ರೂ.4.82 ಲಕ್ಷ ಹಾಗೂ ಸದಸ್ಯರ ಆರೋಗ್ಯ ವಿಮೆಗೆ ರೂ.35.50 ಲಕ್ಷ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮುಂಡಗೋಡಿನಲ್ಲಿ ಯಲ್ಲಾಪುರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅಲ್ಲಿನ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೃಹತ್ ಗೋದಾಮು ನಿರ್ಮಿಸಿ, ಅಲ್ಲಿಂದ ಅಡಿಕೆಯನ್ನು ಯಲ್ಲಾಪುರಕ್ಕೆ ತಂದು ರೈತರ ಹೆಸರಿನಲ್ಲೇ ವಿಕ್ರಿ ಮಾಡುವ ಚಿಂತನೆ ಇದೆ ಎಂದು ಎನ್.ಕೆ. ಭಟ್ಟ ತಿಳಿಸಿದರು.
ಸಂಸ್ಥೆಯಲ್ಲಿ 1,937 ಸದಸ್ಯರಿದ್ದು, ಸದಸ್ಯರ ಸಹಕಾರ ಮತ್ತು ವಿಶ್ವಾಸದಿಂದ ಟಿಎಂಎಸ್ ತಾಲೂಕಿನಲ್ಲಿ ಹೆಮ್ಮೆಪಡುವಂತಹ ಸ್ಥಾನಕ್ಕೇರಿದೆ. ಸಂಸ್ಥೆಯ ಸೂಪರ್ ಮಾರ್ಕೆಟ್ ಹಾಗೂ ಪೆಟ್ರೋಲ್ ಪಂಪ್ಗಳ ಗ್ರಾಹಕರ ಕೊಡುಗೆಯೂ ಈ ಸಾಧನೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.
ಕಳೆದ ಸಾಲಿನಲ್ಲಿ ಅಡಿಕೆ ದಲಾಲಿ ವಿಭಾಗದಿಂದ ರೂ.211.60 ಕೋಟಿ, ಹಸಿ ಅಡಿಕೆಯಿಂದ ರೂ.3.87 ಕೋಟಿ ಹಾಗೂ ಅಡಿಕೆ ಮಾರಾಟದಿಂದ ರೂ.718.50 ಕೋಟಿ ವ್ಯವಹಾರ ನಡೆದಿದೆ. ಪೆಟ್ರೋಲ್ ಪಂಪ್ನಲ್ಲಿ ರೂ.17.31 ಕೋಟಿ, ರೇಷನ್ ವಿಭಾಗದಲ್ಲಿ ರೂ.5.48 ಲಕ್ಷ, ಗೊಬ್ಬರದಲ್ಲಿ ರೂ.5.31 ಕೋಟಿ, ಅಡಿಕೆ ಖರೀದಿಯಲ್ಲಿ ರೂ.14.18 ಕೋಟಿ ಹಾಗೂ ಸೂಪರ್ ಮಾರ್ಕೆಟ್ನಲ್ಲಿ ರೂ.9.67 ಕೋಟಿ ವ್ಯವಹಾರ ನಡೆದಿದೆ ಎಂದು ವಿವರಿಸಿದರು.
ನಿರ್ದೇಶಕ ವೆಂಕಟ್ರಮಣ ಭಟ್ಟ ಕಿರಕುಂಭ ಹಾಗೂ ಮುಖ್ಯ ಕಾರ್ಯನಿರ್ವಾಹಕ ಸುದೀಪ್ ಹೆಗಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


