ಯಲ್ಲಾಪುರ: ಮದ್ಯ ಸೇವಿಸಿ ಬಂದಿದ್ದ ಸರ್ಕಾರಿ ನೌಕರರೊಬ್ಬರು ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರ ಬಳಿ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಕೆರಳಿದ ಸಾರ್ವಜನಿಕರು ಆ ನೌಕರನಿಗೆ ಥಳಿಸಿದ ಘಟನೆ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಮಾಗೋಡು ಕ್ರಾಸ್ ಬಳಿ ಸೋಮವಾರ ನಡೆದಿದೆ.
ಮಾಗೋಡು ಕ್ರಾಸ್ ಬಳಿ ಕೆಲವರು ಮೀನು ಹಾಗೂ ತರಕಾರಿ ಮಾರಾಟ ಮಾಡುತ್ತಿದ್ದರು. ಈ ವೇಳೆ ಬೇರೆ ಜಿಲ್ಲೆಯ ಪಟ್ಟಣ ಪಂಚಾಯಿತಿಯೊಂದರಲ್ಲಿ ಸಿಬ್ಬಂದಿಯಾಗಿರುವ ಅಜಯ ಗಣೇಶ ಭಂಡಾರ್ಕರ್ ಎಂಬವರು ಮದ್ಯ ಸೇವಿಸಿ ಅಲ್ಲಿಗೆ ಬಂದಿದ್ದರು ಎನ್ನಲಾಗಿದೆ. ಮೀನು ಮಾರುತ್ತಿದ್ದ ಮಹಿಳೆಯ ಬಳಿ ಉಚಿತವಾಗಿ ಮೀನು ನೀಡುವಂತೆ ಒತ್ತಾಯಿಸಿದ್ದು, ಮೀನು ನೀಡದ ಹಿನ್ನೆಲೆಯಲ್ಲಿ ಬುಟ್ಟಿಯಲ್ಲಿದ್ದ ಮೀನುಗಳನ್ನು ಚೆಲ್ಲಿದ್ದಾರೆ ಎಂದು ಸ್ಥಳೀಯರ ಮಾಹಿತಿ ಆಧರಿಸಿ ತಿಳಿದುಬಂದಿದೆ.
ಅಲ್ಲದೆ, ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳೆಯೊಂದಿಗೂ ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಇದರಿಂದ ಸ್ಥಳದಲ್ಲಿದ್ದ ಸಾರ್ವಜನಿಕರು ನೌಕರನನ್ನು ಪ್ರಶ್ನಿಸಿದ್ದು, ಮಾತಿನ ಸಂದರ್ಭದಲ್ಲಿ ‘ಇಲ್ಲಿ ಮೀನು ಮಾರಾಟ ಮಾಡುವಂತಿಲ್ಲ’ ಎಂದು ಅವರು ಹೇಳಿರುವುದಾಗಿ ತಿಳಿದುಬಂದಿದೆ.
ಈ ನಡುವೆ ತಮ್ಮ ತಪ್ಪನ್ನು ಒಪ್ಪಿಕೊಂಡ ಅಜಯ ಗಣೇಶ ಭಂಡಾರ್ಕರ್, ಉಂಟಾದ ನಷ್ಟವನ್ನು ಭರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಮಾತಿನ ಚಕಮಕಿ ಮುಂದುವರಿದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯ ಮೇಲೆ ಅವರು ಕೈ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಅಜಯ ಗಣೇಶ ಭಂಡಾರ್ಕರರನ್ನು ಹಿಡಿದು ಪ್ರಶ್ನಿಸಿದ್ದು, ಈ ವೇಳೆ ಅಜಯ ಭಂಡಾರ್ಕರ್ ಅವರಿಗೆ ಥಳಿಸಿದ್ದಾರೆ ಎನ್ನಲಾಗಿದೆ. ಅವರನ್ನು ಬಿಡಿಸಲು ಬಂದಿದ್ದ ಸ್ನೇಹಿತನಿಗೂ ಸಾರ್ವಜನಿಕರಿಂದ ಏಟು ಬಿದ್ದಿದ್ದು, ಥಳಿತಕ್ಕೊಳಗಾದ ಮಹಿಳೆಯೂ ಅಜಯ ಗಣೇಶ ಭಂಡಾರ್ಕರ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಘಟನೆಯ ದೃಶ್ಯಾವಳಿಗಳು ಸ್ಥಳದಲ್ಲಿದ್ದ ಕೆಲವರ ಮೊಬೈಲ್ಗಳಲ್ಲಿ ಸೆರೆಯಾಗಿವೆ. ಘಟನೆಯ ಬಳಿಕ ಸಂತ್ರಸ್ತರು ಪೊಲೀಸರ ಮೊರೆ ಹೋಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿದಿದೆ. ಅಜಯ ಗಣೇಶ ಭಂಡಾರ್ಕರ್ ಬೈಂದೂರು ಪ.ಪಂ ಮುಖ್ಯಾಧಿಕಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
(ಸ್ಥಳೀಯರ, ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ನು ಆಧರಿಸಿದ ವರದಿ ಇದಾಗಿದ್ದು, ಘಟನೆಯ ಸತ್ಯಾಸತ್ಯತೆ ಇನ್ನಷ್ಟೇ ತಿಳಿದುಬರಬೇಕಿದೆ)


