ಬನವಾಸಿ: ಬಾಂದಾರದ ಪಕ್ಕದಲ್ಲಿ ದಾಸ್ತಾನು ಮಾಡಲಾಗಿದ್ದ 24 ಕಬ್ಬಿಣದ ಗೇಟ್ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ಬನವಾಸಿ ಹೋಬಳಿಯ ಉಂಚಳ್ಳಿ ಅರ್ಲಹೊಂಡ ಗ್ರಾಮದಲ್ಲಿ ನಡೆದಿದೆ.
ಈ ಕುರಿತು ಶಿರಸಿ ಸಣ್ಣ ನೀರಾವರಿ ಉಪವಿಭಾಗದ ಕಿರಿಯ ಇಂಜಿನಿಯರ್ ವಿಕಾಸ ತಂದೆ ಕೃಷ್ಣ ನಾಯ್ಕ (52) ಅವರು ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಉಂಚಳ್ಳಿ ಅರ್ಲಹೊಂಡ ಗ್ರಾಮದಲ್ಲಿರುವ ಸೇತುವೆ ಸಹಿತ ಬಾಂದಾರದಲ್ಲಿ ನೀರು ಸಂಗ್ರಹಿಸಲು ಒಟ್ಟು 39 ಕಬ್ಬಿಣದ ಗೇಟ್ಗಳನ್ನು ಅಳವಡಿಸಲಾಗಿತ್ತು. ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಇಲಾಖೆಯವರು ಮೇ 28ರಂದು 38 ಗೇಟ್ಗಳನ್ನು ಬಾಂದಾರದಿಂದ ತೆಗೆದು, ಬಾಂದಾರದ ಪಕ್ಕದಲ್ಲೇ ದಾಸ್ತಾನು ಮಾಡಿದ್ದರು.
ಸೆಪ್ಟೆಂಬರ್ 15ರಂದು ಸಂಜೆ ಕಿರಿಯ ಇಂಜಿನಿಯರ್ ವಿಕಾಸ ನಾಯ್ಕ ಅವರು ಬಾಂದಾರಕ್ಕೆ ತೆರಳಿ ಪರಿಶೀಲಿಸಿದಾಗ ದಾಸ್ತಾನು ಮಾಡಲಾಗಿದ್ದ 38 ಗೇಟ್ಗಳೂ ಸ್ಥಳದಲ್ಲಿದ್ದವು. ಆದರೆ ಮರುದಿನ, ಸೆಪ್ಟೆಂಬರ್ 16ರಂದು ಬೆಳಗ್ಗೆ ಸುಮಾರು 10 ಗಂಟೆಗೆ ಸ್ಥಳೀಯರಾದ ಈಶ್ವರ ನಾಯ್ಕ ಅವರು ಕರೆ ಮಾಡಿ ಕೆಲವು ಗೇಟ್ಗಳು ಕಾಣುತ್ತಿಲ್ಲ ಎಂದು ಮಾಹಿತಿ ನೀಡಿದರು.
ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ದಾಸ್ತಾನು ಮಾಡಲಾಗಿದ್ದ 38 ಗೇಟ್ಗಳ ಪೈಕಿ 24 ಗೇಟ್ಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕಚೇರಿಯಲ್ಲಿ ವಿಚಾರಿಸಿದಾಗ ಇಲಾಖೆಯಿಂದ ಯಾವುದೇ ಗೇಟ್ಗಳನ್ನು ಬೇರೆಡೆಗೆ ಸ್ಥಳಾಂತರಿಸಿಲ್ಲ ಎಂಬುದು ತಿಳಿದುಬಂದಿದೆ.
ಹೀಗಾಗಿ ಸೆಪ್ಟೆಂಬರ್ 15ರಂದು ಸಂಜೆ 5 ಗಂಟೆಯಿಂದ ಸೆಪ್ಟೆಂಬರ್ 16ರಂದು ಬೆಳಗ್ಗೆ 10 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಬಾಂದಾರದ ಪಕ್ಕದಲ್ಲಿ ದಾಸ್ತಾನು ಮಾಡಲಾಗಿದ್ದ ಕಬ್ಬಿಣದ ಗೇಟ್ಗಳ ಪೈಕಿ 24 ಗೇಟ್ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಕಳುವಾದ 24 ಕಬ್ಬಿಣದ ಗೇಟ್ಗಳ ಒಟ್ಟು ಅಂದಾಜು ಮೌಲ್ಯ ರೂ.2.40 ಲಕ್ಷ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗೇಟ್ಗಳನ್ನು ಹುಡುಕಾಡಿದ ಬಳಿಕ ಹಾಗೂ ಇಲಾಖೆಯ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಮಾರ್ಗದರ್ಶನ ಪಡೆದ ನಂತರ ಕಿರಿಯ ಇಂಜಿನಿಯರ್ ವಿಕಾಸ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


