ಯಲ್ಲಾಪುರ: ಸರ್ಕಾರದ ಸುತ್ತೋಲೆಯಿಂದ ಕ್ಷೇತ್ರದ ಶೇ.70ರಷ್ಟು ಮತದಾರರು ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಯಲ್ಲಾಪುರದ ಶಾಸಕರು ವಿಧಾನಸಭೆಯಲ್ಲೇ ತಮ್ಮ ರಾಜೀನಾಮೆ ಘೋಷಿಸಬೇಕಿತ್ತು ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಆಗ್ರಹಿಸಿದರು.
ಆನಗೋಡ ಮತ್ತು ದೇಹಳ್ಳಿ ಗ್ರಾಮ ಪಂಚಾಯಿತಿ ಎದುರು ಬಿಜೆಪಿ ವತಿಯಿಂದ ನಡೆದ ‘ನಮ್ಮ ಮನೆ ನಮ್ಮ ಹಕ್ಕು’ ಜನಾಂದೋಲನದಲ್ಲಿ ಮಾತನಾಡಿದ ಅವರು, ಹಿರಿಯ ಶಾಸಕರೇ ತಮ್ಮ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳುತ್ತಾರೆ. ಅದೇ ರೀತಿ ಕ್ಷೇತ್ರದ ಬಹುತೇಕ ಮತದಾರರು ಸರ್ಕಾರದ ಸುತ್ತೋಲೆಯಿಂದ ಸಮಸ್ಯೆ ಎದುರಿಸುತ್ತಿರುವಾಗ ಜನರ ಪರವಾಗಿ ರಾಜೀನಾಮೆ ಘೋಷಿಸಿದ್ದರೆ ಶಾಸಕರ ಜನಸ್ಪಂದನೆ ಬಗ್ಗೆ ಕ್ಷೇತ್ರಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಆದರೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಅಲ್ಲಿಗೇ ಬಿಟ್ಟಿರುವುದು ಮತದಾರರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಹೇಳಿದರು.
ಹಿರಿಯ ನಾಯಕ ಉಮೇಶ್ ಭಾಗ್ವತ ಮಾತನಾಡಿ, ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಈ ಸಮಸ್ಯೆಯ ಹೊಣೆಯನ್ನು ಯಲ್ಲಾಪುರದ ಶಾಸಕರು ಸಂಪೂರ್ಣವಾಗಿ ಹೊತ್ತುಕೊಂಡು ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮತ್ತೋರ್ವ ನಾಯಕ ಗಣಪತಿ ಮಾನಿಗದ್ದೆ ಮಾತನಾಡಿ, ಸರ್ಕಾರದ ವಿವಿಧ ಆದೇಶಗಳು ಜನರಿಗೆ ಉರುಳಾಗುತ್ತಿವೆ ಎಂದು ಆರೋಪಿಸಿದರು. ಒಂದು ದಿನ ಗುಟ್ಕಾ ನಿಷೇಧ, ಮತ್ತೊಂದು ದಿನ ಕರ ಸ್ವೀಕರಿಸಬಾರದೆಂಬ ಆದೇಶ ಹೀಗೆ ಸರ್ಕಾರದ ನಿರ್ಧಾರಗಳು ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ ಎಂದು ಹೇಳಿದರು.
ದೇಹಳ್ಳಿಯಲ್ಲಿ ಮಾತನಾಡಿದ ಗಣಪತಿ ಮುದ್ದೇಪಾಲ, ಕಾಂಗ್ರೆಸ್ ಆಡಳಿತ ಜನಸಾಮಾನ್ಯರಿಗೆ ಮಾರಕವಾಗಿದೆ. ಜನರ ಆಶೋತ್ತರಗಳನ್ನು ಕಡೆಗಣಿಸಿ ತಮಗೆ ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತಿರುವುದು ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಲು ಕಾರಣವಾಗಬಹುದು ಎಂದು ಹೇಳಿದರು.
ವಿಶ್ವನಾಥ ಹಳೇಮನೆ ಮಾತನಾಡಿ, ಕಸ್ತೂರಿರಂಗನ್ ವರದಿ, ಗಾಂವಠಾಣ ಸಮಸ್ಯೆ ಹಾಗೂ ಇ-ಸ್ವತ್ತು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಗಮನ ಸೆಳೆದರು.
ಶ್ರೀಪತಿ ಮುದ್ದೇಪಾಲ, ರಾಮಣ್ಣ ಚಿಕ್ಯಾನಮನೆ ಹಾಗೂ ರಾಮಕೃಷ್ಣ ಅಳ್ವಗದ್ದೆ ಮಾತನಾಡಿದರು. ರೈತಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ, ಪ್ರಮುಖರಾದ ಸತ್ಯನಾರಾಯಣ ಹೆಗಡೆ, ಕೆ.ಟಿ. ಹೆಗಡೆ, ಗಣಪತಿ ಕೊಂಬೆ, ದತ್ತಣ್ಣ ಬೋಳಗುಡ್ಡೆ, ಕೀರ್ತಿರಾಜ ಕೋಟೆಮನೆ, ಮಹೇಶ ಕುಣಬಿ ಹಾಗೂ ಕುಸುಮಾ ಸಿದ್ದಿ ಉಪಸ್ಥಿತರಿದ್ದರು.


