Friday, October 23, 2026
HomeLocal Newsಬಿಜೆಪಿ ಜನಾಂದೋಲನ: ಶಾಸಕರ ರಾಜೀನಾಮೆಗೆ ಪ್ರಸಾದ ಹೆಗಡೆ ಆಗ್ರಹ

ಬಿಜೆಪಿ ಜನಾಂದೋಲನ: ಶಾಸಕರ ರಾಜೀನಾಮೆಗೆ ಪ್ರಸಾದ ಹೆಗಡೆ ಆಗ್ರಹ

ಯಲ್ಲಾಪುರ: ಸರ್ಕಾರದ ಸುತ್ತೋಲೆಯಿಂದ ಕ್ಷೇತ್ರದ ಶೇ.70ರಷ್ಟು ಮತದಾರರು ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಯಲ್ಲಾಪುರದ ಶಾಸಕರು ವಿಧಾನಸಭೆಯಲ್ಲೇ ತಮ್ಮ ರಾಜೀನಾಮೆ ಘೋಷಿಸಬೇಕಿತ್ತು ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಆಗ್ರಹಿಸಿದರು.

ಆನಗೋಡ ಮತ್ತು ದೇಹಳ್ಳಿ ಗ್ರಾಮ ಪಂಚಾಯಿತಿ ಎದುರು ಬಿಜೆಪಿ ವತಿಯಿಂದ ನಡೆದ ‘ನಮ್ಮ ಮನೆ ನಮ್ಮ ಹಕ್ಕು’ ಜನಾಂದೋಲನದಲ್ಲಿ ಮಾತನಾಡಿದ ಅವರು, ಹಿರಿಯ ಶಾಸಕರೇ ತಮ್ಮ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳುತ್ತಾರೆ. ಅದೇ ರೀತಿ ಕ್ಷೇತ್ರದ ಬಹುತೇಕ ಮತದಾರರು ಸರ್ಕಾರದ ಸುತ್ತೋಲೆಯಿಂದ ಸಮಸ್ಯೆ ಎದುರಿಸುತ್ತಿರುವಾಗ ಜನರ ಪರವಾಗಿ ರಾಜೀನಾಮೆ ಘೋಷಿಸಿದ್ದರೆ ಶಾಸಕರ ಜನಸ್ಪಂದನೆ ಬಗ್ಗೆ ಕ್ಷೇತ್ರಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಆದರೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಅಲ್ಲಿಗೇ ಬಿಟ್ಟಿರುವುದು ಮತದಾರರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಹೇಳಿದರು.

ಹಿರಿಯ ನಾಯಕ ಉಮೇಶ್ ಭಾಗ್ವತ ಮಾತನಾಡಿ, ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಈ ಸಮಸ್ಯೆಯ ಹೊಣೆಯನ್ನು ಯಲ್ಲಾಪುರದ ಶಾಸಕರು ಸಂಪೂರ್ಣವಾಗಿ ಹೊತ್ತುಕೊಂಡು ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮತ್ತೋರ್ವ ನಾಯಕ ಗಣಪತಿ ಮಾನಿಗದ್ದೆ ಮಾತನಾಡಿ, ಸರ್ಕಾರದ ವಿವಿಧ ಆದೇಶಗಳು ಜನರಿಗೆ ಉರುಳಾಗುತ್ತಿವೆ ಎಂದು ಆರೋಪಿಸಿದರು. ಒಂದು ದಿನ ಗುಟ್ಕಾ ನಿಷೇಧ, ಮತ್ತೊಂದು ದಿನ ಕರ ಸ್ವೀಕರಿಸಬಾರದೆಂಬ ಆದೇಶ ಹೀಗೆ ಸರ್ಕಾರದ ನಿರ್ಧಾರಗಳು ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ ಎಂದು ಹೇಳಿದರು.

ದೇಹಳ್ಳಿಯಲ್ಲಿ ಮಾತನಾಡಿದ ಗಣಪತಿ ಮುದ್ದೇಪಾಲ, ಕಾಂಗ್ರೆಸ್ ಆಡಳಿತ ಜನಸಾಮಾನ್ಯರಿಗೆ ಮಾರಕವಾಗಿದೆ. ಜನರ ಆಶೋತ್ತರಗಳನ್ನು ಕಡೆಗಣಿಸಿ ತಮಗೆ ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತಿರುವುದು ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಲು ಕಾರಣವಾಗಬಹುದು ಎಂದು ಹೇಳಿದರು.

ವಿಶ್ವನಾಥ ಹಳೇಮನೆ ಮಾತನಾಡಿ, ಕಸ್ತೂರಿರಂಗನ್ ವರದಿ, ಗಾಂವಠಾಣ ಸಮಸ್ಯೆ ಹಾಗೂ ಇ-ಸ್ವತ್ತು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಗಮನ ಸೆಳೆದರು.

ಶ್ರೀಪತಿ ಮುದ್ದೇಪಾಲ, ರಾಮಣ್ಣ ಚಿಕ್ಯಾನಮನೆ ಹಾಗೂ ರಾಮಕೃಷ್ಣ ಅಳ್ವಗದ್ದೆ ಮಾತನಾಡಿದರು. ರೈತಮೋರ್ಚಾ ಜಿಲ್ಲಾ ‌ಪ್ರಧಾನಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ, ಪ್ರಮುಖರಾದ ಸತ್ಯನಾರಾಯಣ ಹೆಗಡೆ, ಕೆ.ಟಿ. ಹೆಗಡೆ, ಗಣಪತಿ ಕೊಂಬೆ, ದತ್ತಣ್ಣ ಬೋಳಗುಡ್ಡೆ, ಕೀರ್ತಿರಾಜ ಕೋಟೆಮನೆ, ಮಹೇಶ ಕುಣಬಿ ಹಾಗೂ ಕುಸುಮಾ ಸಿದ್ದಿ ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share