Friday, October 23, 2026
HomeLocal Newsಕಸ್ತೂರಿರಂಗನ್ ವರದಿ: ಜನರ ಅಭದ್ರತೆಯನ್ನು ದೂರ ಮಾಡಿ

ಕಸ್ತೂರಿರಂಗನ್ ವರದಿ: ಜನರ ಅಭದ್ರತೆಯನ್ನು ದೂರ ಮಾಡಿ

ಕಾರವಾರ: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ 10 ಜಿಲ್ಲೆಗಳ ಲಕ್ಷಾಂತರ ಜನರ ದೈನಂದಿನ ಜೀವನ ಹಾಗೂ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರುವ ಕಸ್ತೂರಿರಂಗನ್ ವರದಿ ಕುರಿತು ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಸುದೀರ್ಘ ಹಾಗೂ ಅರ್ಥಪೂರ್ಣ ಚರ್ಚೆ ನಡೆದಿರುವುದು ಅತ್ಯಂತ ಸ್ವಾಗತಾರ್ಹ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದ ನಿವಾಸಿಗಳ ನೈಜ ಸ್ಥಿತಿಗತಿ, ದೈನಂದಿನ ಸಂಕಷ್ಟಗಳು ಹಾಗೂ ಜೀವನೋಪಾಯದ ಪರವಾಗಿ ಧ್ವನಿ ಎತ್ತಿ, ಗಂಭೀರವಾಗಿ ಚರ್ಚಿಸಿದ ಎಲ್ಲ ಗೌರವಾನ್ವಿತ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಷಯದಲ್ಲಿ ವಾಸ್ತವಾಂಶಗಳನ್ನು ಆಧರಿಸಿ ಮಾನ್ಯ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ವಿಶೇಷ ಸಮಿತಿಯೊಂದನ್ನು ನೇಮಿಸಲು ತೀರ್ಮಾನಿಸಿರುವುದು ಶ್ಲಾಘನೀಯ ಕ್ರಮವಾಗಿದೆ. ಆದರೆ, ಸಮಿತಿಯು ತನ್ನ ವರದಿ ಸಿದ್ಧಪಡಿಸುವಾಗ ಪಶ್ಚಿಮ ಘಟ್ಟದ ಜನರ ಬದುಕಿಗೆ ಸಂಬಂಧಿಸಿದ ಪ್ರಮುಖ ಹಾಗೂ ಸಂವೇದನಾಶೀಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಶಿಸಿ, ಒತ್ತಾಯಿಸಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ತಲೆತಲಾಂತರಗಳಿಂದ ನೆಲೆಸಿರುವ ಮೂಲ ನಿವಾಸಿಗಳು, ರೈತರು ಹಾಗೂ ಶ್ರಮಿಕರ ಸಂಕಷ್ಟದ ಬದುಕಿಗೆ ಮತ್ತು ಅವರ ಮೂಲಭೂತ ಜೀವನೋಪಾಯದ ಹಕ್ಕಿಗೆ ಯಾವುದೇ ರೀತಿಯಲ್ಲಿ ಭಂಗ ಬಾರದಂತೆ ಸಮಿತಿಯು ತನ್ನ ವರದಿ ಸಿದ್ಧಪಡಿಸಬೇಕು ಎಂದು ಕಾಗೇರಿ ಹೇಳಿದ್ದಾರೆ.

ಸ್ವಂತ ಜಾಗ, ಸರ್ಕಾರಿ ಅಥವಾ ಇತರ ಯಾವುದೇ ಭೂಮಿಯಲ್ಲಿರುವ ಸಾರ್ವಜನಿಕರ ಮನೆಗಳು, ಕೃಷಿ ಭೂಮಿ, ಅತಿಕ್ರಮಣ ಭೂಮಿ, ನಿವೇಶನಗಳು ಹಾಗೂ ರಸ್ತೆ, ಸಣ್ಣ ಕೈಗಾರಿಕೆ ಸೇರಿದಂತೆ ಮೂಲಸೌಕರ್ಯಗಳು ಮತ್ತು ಸಂಪೂರ್ಣ ಜನವಸತಿ ಪ್ರದೇಶಗಳನ್ನು ಕಸ್ತೂರಿರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶಗಳ (ESA) ವ್ಯಾಪ್ತಿಯಿಂದ ಸಂಪೂರ್ಣವಾಗಿ ವಿನಾಯಿತಿ ನೀಡಿ ಹೊರಗಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೇವಲ ನೈಜ ಹಾಗೂ ಅರಣ್ಯ ಪ್ರದೇಶವನ್ನು ಮಾತ್ರ ವೈಜ್ಞಾನಿಕವಾಗಿ ಗುರುತಿಸಿ, ಆ ವ್ಯಾಪ್ತಿಯನ್ನು ಮಾತ್ರ ಅಂತಿಮ ವರದಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.

ಸರ್ಕಾರ ನೇಮಿಸುವ ಸಮಿತಿಯು ಪಶ್ಚಿಮ ಘಟ್ಟದ ಜನರ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಸುದೀರ್ಘವಾಗಿ ಪರಿಶೀಲಿಸಿ, ಜನವಸತಿ, ಕೃಷಿ ಭೂಮಿ ಹಾಗೂ ಅರಣ್ಯ ಅತಿಕ್ರಮಣ ಭೂಮಿಯನ್ನು ಸಂಪೂರ್ಣವಾಗಿ ಹೊರತುಪಡಿಸಿದ ಸಮಗ್ರ ಹಾಗೂ ವಾಸ್ತವ ಆಧಾರಿತ ವರದಿಯನ್ನು ಸಿದ್ಧಪಡಿಸಬೇಕು. ಈ ವರದಿಯ ಆಧಾರದ ಮೇಲೆ ಸೂಕ್ತ ಮೇಲ್ಮನವಿ ಸಲ್ಲಿಸಲು ಹಾಗೂ ವರದಿ ಸಲ್ಲಿಕೆಗೆ ಅಗತ್ಯವಿರುವ ಹೆಚ್ಚುವರಿ ಕಾಲಾವಕಾಶವನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕಾಗೇರಿ ತಿಳಿಸಿದ್ದಾರೆ.

ಪಶ್ಚಿಮ ಘಟ್ಟದ ಜನರ ಮನದಲ್ಲಿರುವ ಆತಂಕ, ಭಯ ಹಾಗೂ ಅಭದ್ರತೆಯ ಭಾವನೆಯನ್ನು ಶಾಶ್ವತವಾಗಿ ದೂರ ಮಾಡಿ, ಅವರ ನೆಮ್ಮದಿಯ ಬದುಕಿಗೆ ಸರ್ಕಾರ ತಕ್ಷಣವೇ ಸೂಕ್ತ ಕಾನೂನಾತ್ಮಕ ಪರಿಹಾರ ಒದಗಿಸಬೇಕು ಎಂದು ಅವರು ವಿನಂತಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share