ಶಿರಸಿ: ತಾಲೂಕಿನ ಚಿಪಗಿ ನಾರಾಯಣಗುರು ನಗರದಲ್ಲಿ ಜನಪ್ರತಿನಿಧಿಯೊಬ್ಬರು ತಮ್ಮ ಗೌರವಧನವನ್ನು ಸಂಪೂರ್ಣವಾಗಿ ಸಾರ್ವಜನಿಕ ಹಿತಕ್ಕಾಗಿ ಬಳಸಿದ ಅಪರೂಪದ ಉದಾಹರಣೆಗೆ ಸಾಕ್ಷಿಯಾಗಿದ್ದಾರೆ.
ಇಸಳೂರು ಗ್ರಾಮ ಪಂಚಾಯತ್ ಸದಸ್ಯ ನವೀನ್ ಶೆಟ್ಟಿ ಅವರು ತಮ್ಮ ಐದು ವರ್ಷದ ಅವಧಿಯಲ್ಲಿ ಪಡೆದ ಗೌರವಧನವನ್ನು ಜನೋಪಯೋಗಿ ಕಾರ್ಯಗಳಿಗೆ ಮೀಸಲಿಟ್ಟು, ಎರಡು ಸುಸಜ್ಜಿತ ಬಸ್ ತಂಗುದಾಣಗಳನ್ನು ನಿರ್ಮಿಸಿ ಮಾದರಿ ಕಾರ್ಯ ಮಾಡಿದ್ದಾರೆ.
ಚಿಪಗಿ ಭಾಗದಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರು ಮಳೆ–ಬಿಸಿಲಿಗೆ ತುತ್ತಾಗುತ್ತಿದ್ದ ಸ್ಥಿತಿ ಬಹುಕಾಲದಿಂದ ಮುಂದುವರಿದಿತ್ತು. ಶಾಲಾ–ಕಾಲೇಜು ವಿದ್ಯಾರ್ಥಿಗಳು, ಹಿರಿಯರು ಹಾಗೂ ಮಹಿಳೆಯರು ರಸ್ತೆಬದಿಯಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ಇತ್ತು. ಈ ಸಮಸ್ಯೆಯನ್ನು ಮನಗಂಡ ನವೀನ್ ಶೆಟ್ಟಿ ಅವರು ವೈಯಕ್ತಿಕ ಪ್ರಯೋಜನವನ್ನು ಬದಿಗಿಟ್ಟು ತಮ್ಮದೇ ಗೌರವಧನದಿಂದ ಬಸ್ ತಂಗುದಾಣ ನಿರ್ಮಾಣಕ್ಕೆ ಮುಂದಾದರು. ನಿರ್ಮಿಸಲಾದ ತಂಗುದಾಣಗಳಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಮಳೆ–ಬಿಸಿಲಿನಿಂದ ರಕ್ಷಣೆ ಹಾಗೂ ಸುರಕ್ಷತಾ ದೃಷ್ಟಿಯಿಂದ ಸೂಕ್ತ ವಿನ್ಯಾಸ ಕಲ್ಪಿಸಲಾಗಿದೆ.
ಈ ಬಸ್ ತಂಗುದಾಣಗಳ ಲೋಕಾರ್ಪಣೆಯನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳು ತಮ್ಮ ಸ್ಥಾನಮಾನವನ್ನು ಸಮಾಜ ಸೇವೆಗೆ ಬಳಸಿದರೆ ಗ್ರಾಮೀಣ ಅಭಿವೃದ್ಧಿ ವೇಗವಾಗಿ ಸಾಧ್ಯವಾಗುತ್ತದೆ. ಸರ್ಕಾರದ ಅನುದಾನವಿಲ್ಲದೆ ಸ್ವಂತ ಗೌರವಧನದಿಂದ ಸೌಲಭ್ಯ ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು, ಸ್ಥಳೀಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮನೋಭಾವವೇ ನಿಜವಾದ ಸೇವೆ. ಚಿಪಗಿಯಲ್ಲಿ ನಿರ್ಮಿಸಲಾದ ಈ ಬಸ್ ತಂಗುದಾಣಗಳು ಸಾರ್ವಜನಿಕರ ದಿನನಿತ್ಯದ ತೊಂದರೆಯನ್ನು ನಿವಾರಿಸುವಲ್ಲಿ ಸಹಕಾರಿ ಎಂದು ತಿಳಿಸಿದರು.
ನವೀನ್ ಶೆಟ್ಟಿ ಪ್ರತಿಕ್ರಿಯಿಸಿ, ನನ್ನನ್ನು ಆಯ್ಕೆ ಮಾಡಿದ ಜನತೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಆಶಯದಿಂದ ಈ ಕಾರ್ಯ ಕೈಗೊಂಡಿದ್ದೇನೆ. ಮುಂದೆಯೂ ಪ್ರದೇಶದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.