Friday, July 24, 2026
Join WhatsApp Group
HomeLocal Newsಈ ಕಾರ್ಯ ಆಯಿತು ಎಂದು ತಿಳಿದುಕೊಳ್ಳಿ!

ಈ ಕಾರ್ಯ ಆಯಿತು ಎಂದು ತಿಳಿದುಕೊಳ್ಳಿ!

ಕಾರವಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಜೆಟ್‌ನಲ್ಲಿ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾರವಾರ: ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವ ಕುರಿತು ಈ ಬಾರಿಯ ಬಜೆಟ್‌ನಲ್ಲಿ ಮಂಜೂರಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಭಾನುವಾರ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ರೂ.198.27 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆ ಮತ್ತು ಯಲ್ಲಾಪುರ ತಾಲ್ಲೂಕಿನ ಖಾನಾಪುರ-ತಾಳಗುಪ್ಪಾ ರಾಜ್ಯ ಹೆದ್ದಾರಿ-93 ರಲ್ಲಿ ರೂ. 720.81 ಲಕ್ಷ ರೂ ವೆಚ್ಚದ ಸೇತುವೆ ಕಾಮಗಾರಿ, ಯಲ್ಲಾಪುರ ಪಟ್ಟಣದಲ್ಲಿ ರೂ.202.89 ಲಕ್ಷ ವೆಚ್ಚದ ನಿರೀಕ್ಷಣಾ ಮಂದಿರದ ಹೊಸ ಕಟ್ಟಡ ನಿರ್ಮಾಣ ಹಾಗೂ ಮುಂಡಗೋಡ ತಾಲ್ಲೂಕಿನಲ್ಲಿ ರೂ.248.18 ಲಕ್ಷ ಮೊತ್ತದ ಹೊಸ ಪ್ರವಾಸಿ ಮಂದಿರ ನಿರ್ಮಾಣ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.

ಕಾರವಾರಕ್ಕೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಆಗಬೇಕು ಎಂದು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕರು ಹಲವು ಬಾರಿ ಬೇಡಿಕೆ ಸಲ್ಲಿಸಿ ಒತ್ತಾಯಿಸಿದ್ದಾರೆ. ಇದು ಈ ಭಾಗದ ಜನರ ಪ್ರಮುಖ ಬೇಡಿಕೆ ಕೂಡ ಆಗಿದ್ದು, ಈ ಬಾರಿಯ ಆಯವ್ಯಯದಲ್ಲಿ ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾತಿ ನೀಡಲಾಗುವುದು ಎಂದರು.

ಇಲ್ಲಿನ ಬಡ ಮತ್ತು ಸಾಮಾನ್ಯ ವರ್ಗದ ಸಾರ್ವಜಿನಕರು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ, ಉಡುಪಿ, ಮಂಗಳೂರಿಗೆ ಹೋಗಬೇಕಾಗಿತ್ತು. ಪ್ರಸ್ತುತ ನಿರ್ಮಿಸಿರುವ 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಈ ಸಮಸ್ಯೆ ನಿವಾರಣೆಯಾಗಿದ್ದು, ಇಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಕೂಡಾ ಯೂನಿಟ್ ಆರಂಭಗೊಳ್ಳುತ್ತಿದೆ. ಕಾರವಾರದಲ್ಲಿ ಬಾಕಿ ಇರುವ ಉಳಗಾ-ಕೆರವಡಿ ಸೇತುವೆ ಕಾಮಗಾರಿಯನ್ನು ಆದ್ಯತೆಯಲ್ಲಿ ಕೈಗೊಳ್ಳಲಾಗುವುದು, ಕಾಮಗಾರಿಗೆ ಅಗತ್ಯವಿರುವ ಸಂಪೂರ್ಣ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದ ಅವರು, ಈ ಕಾರ್ಯ ಆಯಿತು ಎಂದು ತಿಳಿದುಕೊಳ್ಳಿ ಎಂದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ದಿ ಯೋಜನೆಗಳೂ ನಡೆಯುತ್ತಿಲ್ಲ ಎಂಬ ವಿರೋಧ ಪಕ್ಷಗಳ ಟೀಕೆಗೆ, ರಾಜ್ಯದ್ಯಾಂತ ನಡೆಯುತ್ತಿರುವ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳೇ ಸೂಕ್ತ ಉತ್ತರ ನೀಡುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಸಾರ್ವಜನಿಕರಿಗೆ ಇದುವರೆಗೆ ರೂ. 2,954 ಕೋಟಿ ನೀಡಿದ್ದು, ರಾಜ್ಯದಲ್ಲಿ 1 ಲಕ್ಷ 18 ಸಾವಿರ ಕೋಟಿ ನೆರವು ನೀಡಲಾಗಿದೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, ರಾಜ್ಯದ ಜನರು ನಮಗೆ ದೊಡ್ಡ ಶಕ್ತಿಯನ್ನು ನೀಡಿದ್ದೀರಿ. ಅದರ ಪ್ರತಿಯಾಗಿ ನಾವು ಜನರ ಹಿತಕ್ಕಾಗಿ ಈ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದೇವೆ. ಎಂದರು

ವೈದ್ಯಕೀಯ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರೋಮಾ ಕೇರ್ ಸೆಂಟರ್ ಮತ್ತು ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದ ಉದ್ದೇಶ ಹೊಂದಲಾಗಿದ್ದು, ಈ ಗುರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಮಾತನಾಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬರುವಾಗ ನಾವು ಏನು ಹೇಳಿದ್ದೆವೋ ಅದನ್ನು ಈಡೇರಿಸುತ್ತಾ ಬಂದಿದ್ದೇವೆ. ಸರ್ಕಾರ 5 ಗ್ಯಾರಂಟಿಗಳನ್ನು ಅತ್ಯಂತ ಸಮರ್ಪಕವಾಗಿ ತಲುಪಿಸಿ ಜನಪರವಾಗಿ ಹೊರ ಹೊಮ್ಮಿದೆ ಎಂದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಸಿಎ ಅಧ್ಯಕ್ಷ ಹಾಗೂ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಮಾತನಾಡಿ, ಈ ಹಿಂದೆ ನಾನು ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡದಿದ್ದರೆ ನನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಳಿದ್ದೆ. ಆದರೆ ಇಂದು ಮುಖ್ಯಮಂತ್ರಿಗಳು ಈ ಘೋಷಣೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿ, ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉದ್ದಿಮೆದಾರರಿಗೆ ವಿಶೇಷ ರಿಯಾಯತಿಗಳನ್ನು ನೀಡುವ ಮೂಲಕ ಕೈಗಾರಿಕೆಗಳನ್ನು ಅರಂಭಿಸಲು ಅವಕಾಶ ನೀಡಿ, ಇಲ್ಲಿನ ಯುವಜನತೆಗೆ ಉದ್ಯೋಗ ಸೃಷ್ಠಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಆರ್.ವಿ. ದೇಶಪಾಂಡೆ, ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ, ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮೂಹಮ್ಮದ್ ಮೊಹಸಿನ್, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ. ಬಿ.ಎಲ್. ಸುಜಾತಾ ರಾಥೋಡ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿ.ಪಂ ಸಿಇಓ ದಿಲೀಪ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಕ್ರಿಮ್ಸ್ ನ ಡೀನ್ ಡಾ.ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share