ಮುಂಡಗೋಡ: ಶಾಸಕ ಶಿವರಾಮ ಹೆಬ್ಬಾರ ಎಂಆರ್ಪಿ ಇದ್ದ ಹಾಗೆ. ಇಲ್ಲಿ ಎಂಆರ್ಪಿ ಎಂದರೆ ವಸ್ತುಗಳ ಮೇಲೆ ಇರುವ ದರದ ವಿವರ ಅಲ್ಲ. ʻಮೆಂಬರ್ ಆಫ್ ರೂಲಿಂಗ್ ಪಾರ್ಟಿʼ ಎಂದರ್ಥ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ ಆ ಪಕ್ಷಕ್ಕೆ ಹೊಂದಿಕೊಳ್ಳುವುದು ಅವರ ಸ್ವಭಾವ ಎಂದು ಮಾಜಿ ಶಾಸಕ, ಮುಂಡಗೋಡಿನ ವಿ.ಎಸ್. ಪಾಟೀಲ ಶಾಸಕ ಶಿವರಾಮ ಹೆಬ್ಬಾರರ ಕಾಲೆಳೆದಿದ್ದಾರೆ.
ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವಿ.ಎಸ್. ಪಾಟೀಲ, ತಾವು ಸ್ಪರ್ಧಿಸಿದ ಪಕ್ಷ ಅಧಿಕಾರಕ್ಕೆ ಬರಲಿಲ್ಲವೆಂದರೆ ಮತ್ತೆ ಅಧಿಕಾರಕ್ಕೆ ಬಂದ ಪಕ್ಷಕ್ಕೆ ಹೋಗುವ ವಿಚಾರವನ್ನು ಶಿವರಾಮ ಹೆಬ್ಬಾರ ಮಾಡುತ್ತಾರೆ. ಅದು ಅವರಿಗೆ ಅನಿವಾರ್ಯವೂ ಹೌದು ಎಂದಿದ್ದಾರೆ.
ಮಾಜಿ ಶಾಸಕ ವಿ.ಎಸ್. ಪಾಟೀಲರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಇರುವದರಿಂದ ಅವರು ಮತ್ತೆ ಬಿಜೆಪಿಗೆ ಮರಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕ್ಷೇತ್ರದಲ್ಲಿ ನಾವು ಅಂದುಕೊಂಡ ಕೆಲಸಗಳು ಆಗುತ್ತಿಲ್ಲ. ಕಾರ್ಯಕರ್ತರಿಗೆ ಭರವಸೆ ನೀಡಿದಂತೆ ಅವರ ಬೇಡಿಕೆಯ ಕೆಲಸಗಳನ್ನು ನಾವು ಮಾಡಿಕೊಡಬೇಕಿದೆ.
ಈಗಿರುವ ಪಕ್ಷದಲ್ಲಿ ಸೂಕ್ತ ಗೌರವ ಸಿಗದಿದ್ದರೆ ಬೇರೆ ಪಕ್ಷಕ್ಕೆ ಹೋಗುವ ವಿಚಾರ ಮಾಡಬೇಕಾದ ಸಂದರ್ಭ ಎದುರಾಗುತ್ತದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ನಮ್ಮ ಕ್ಷೇತ್ರದ ಕಾರ್ಯಕರ್ತರಿಗೆ ನಾವು ಮಾತುಕೊಟ್ಟಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಡಬೇಕಿದೆ. ನಿಮ್ಮ ಸಹಕಾರವಿದ್ದರೆ ಮುಂದುವರೆಯುತ್ತೇವೆ. ಇಲ್ಲವಾದರೆ ನಮ್ಮ ದಾರಿ ನಾವು ಮೋಡಿಕೊಳ್ಳುತ್ತೇವೆ ಎನ್ನುವ ವಿಚಾರವನ್ನು ತಿಳಿಸಿ ಮುಂದಿನ ಹೆಜ್ಜೆ ನಿರ್ಧರಿಸುವ ವಿಚಾರ ಮಾಡಿದ್ದೇವೆ ಎಂದಿದ್ದಾರೆ.
ಈಗಾಗಲೇ ವಿ.ಎಸ್. ಪಾಟೀಲರು ಕೆಲ ಮುಖಂಡರೊಂದಿಗೆ ಸೇರಿ ಬಿಜೆಪಿ ಹೈಕಮಾಂಡ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿ ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎಂಬ ಊಹಾಪೋಹಗಳಿವೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಟೀಲ, ಕ್ಷೇತ್ರದಲ್ಲಿ ನಾಲ್ಕು ಮಂದಿ ಕೂಡಿ ಮಾತನಾಡುವಾಗ ಶಾಸಕ ಹೆಬ್ಬಾರರ ಎದುರು ಸ್ಪರ್ಧಿಸಬೇಕೆಂದರೆ ಅದು ವಿ.ಎಸ್. ಪಾಟೀಲರಿಂದ ಮಾತ್ರ ಸಾಧ್ಯ ಎನ್ನುವವರೂ ಇದ್ದಾರೆ. ಸಹಜವಾಗಿ ಇಂತಹ ಜನಾಭಿಪ್ರಾಯಗಳು ಇದ್ದೇ ಇರುತ್ತವೆ. ಅಭಿಮಾನಿಗಳು ಹೀಗೆಲ್ಲ ಮಾತನಾಡುವುದು ಸಹಜ ಎಂದರು.


