ಬನವಾಸಿ: ಇಲ್ಲಿನ ಜನತಾ ಕಾಲೋನಿಯ ಪ್ರಸಿದ್ಧ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಟ್ರಸ್ಟ್ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾ ಗಣಪತಿಯ ಮೂರ್ತಿಯನ್ನು ಶನಿವಾರ ರಾತ್ರಿ ಅದ್ದೂರಿ ಮೆರವಣಿಗೆಯ ಮೂಲಕ ಸಮೀಪದ ರಾಮತೀರ್ಥ ಕೆರೆಯಲ್ಲಿ ವಿಸರ್ಜಿಸಲಾಯಿತು.
ಸಂಜೆ 5 ಗಂಟೆಗೆ ಅಲಂಕೃತ ವಾಹನದಲ್ಲಿ ಪುಷ್ಪಾಲಂಕೃತ ಮಂಟಪದಲ್ಲಿ ಗಜಮುಖನ ಮೂರ್ತಿಯನ್ನಿರಿಸಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬೆಳಗಾವಿಯ ಹೆಸರಾಂತ ಕಿಂಗ್ ಮೇಕರ್ ಡಿಜೆ ಸೌಂಡ್ ಸಿಸ್ಟಮ್ ಮೂಲಕ ಸಂಗೀತದೊಂದಿಗೆ ಆರಂಭಗೊಂಡ ಮೆರವಣಿಗೆ ಶ್ರೀ ಸಿದ್ದಿವಿನಾಯಕ ದೇವಸ್ಥಾನದಿಂದ ಹೊರಟು ಚರ್ಚ್ ರಸ್ತೆ, ಅಪ್ಪು ಸರ್ಕಲ್, ಕಲ್ಯಾಣ ಮಂಟಪ ರಸ್ತೆ, ಆಲದ ಮರ ವೃತ್ತ, ಸೊರಬ ರಸ್ತೆ, ಪಂಪ ವೃತ್ತ, ಶಿರಸಿ ರಸ್ತೆ ಹಾಗೂ ಶಿವಾಜಿ ವೃತ್ತದ ಮೂಲಕ ರಾಜಬೀದಿಗಳಲ್ಲಿ ಸಾಗಿತು.
ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರು, ಪುರುಷರು, ಯುವಕರು ಹಾಗೂ ಮಕ್ಕಳು ಪಾಲ್ಗೊಂಡು ವಿವಿಧ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ದಾರಿಯುದ್ದಕ್ಕೂ ಮೊಳಗುತ್ತಿದ್ದ ಸಂಗೀತಕ್ಕೆ ತಕ್ಕಂತೆ ಯುವಕರು ಕುಣಿದು ಕುಪ್ಪಳಿಸಿದರೆ, ಕೇಸರಿ ಧ್ವಜಗಳನ್ನು ಹಿಡಿದು ಗಣೇಶ ನಾಮಸ್ಮರಣೆ ಹಾಗೂ ಜಯಘೋಷಗಳನ್ನು ಕೂಗಿದರು.
ಜನವೋ ಜನ: ಗಣೇಶನಿಗೆ ವೈಭವದ ವಿದಾಯ ಹೇಳಲು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಜನರಿಗಿಂತಲೂ, ವಿಸರ್ಜನೆಯ ಅವಿಸ್ಮರಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದವರ ಸಂಖ್ಯೆ ಹೆಚ್ಚಾಗಿತ್ತು. ರಾತ್ರಿ ವೇಳೆಗೆ ಹತ್ತು ಸಾವಿರಕ್ಕೂ ಅಧಿಕ ಜನರು ಬನವಾಸಿಯ ಪ್ರಮುಖ ರಸ್ತೆಗಳತ್ತ ಹರಿದು ಬಂದಿದ್ದರು. ವಿವಿಧ ಊರುಗಳಿಂದ ಆಗಮಿಸಿದ್ದ ಜನರು ರಸ್ತೆ ಬದಿಯಲ್ಲಿ, ಮನೆ, ಅಂಗಡಿ ಹಾಗೂ ಕಟ್ಟಡಗಳ ಮೇಲೆ ನಿಂತು ಗಣೇಶ ವಿಸರ್ಜನಾ ಮೆರವಣಿಗೆಯ ವೈಭವವನ್ನು ವೀಕ್ಷಿಸಿದರು.
ಮೆರವಣಿಗೆಯ ವೇಳೆ ಪಂಪ ವೃತ್ತದಲ್ಲಿ ವಂದೇ ಮಾತರಂ ಗೀತೆ ಮೊಳಗುತ್ತಿದ್ದಂತೆ ನೆರೆದಿದ್ದ ಜನರು ದೇಶಭಕ್ತಿಯ ಭಾವದಲ್ಲಿ ಮಿಂದೆದ್ದರು. ಸಾವಿರಾರು ಮಂದಿ ತಮ್ಮ ಮೊಬೈಲ್ ಫೋನ್ಗಳ ಟಾರ್ಚ್ ಬೆಳಗಿಸಿ ದೇಶಭಕ್ತಿ ಗೀತೆಗೆ ತಲೆದೂಗಿದ ದೃಶ್ಯ ವಿಸರ್ಜನಾ ಮೆರವಣಿಗೆಗೆ ಮತ್ತಷ್ಟು ಮೆರುಗು ತಂದಿತು.
ಬಿಗಿ ಬಂದೋಬಸ್ತ್: ಯಾವುದೇ ಅಹಿತಕರ ಘಟನೆ ನಡೆಯದಂತೆ ಶಿರಸಿ ಸಿಪಿಐ ಸಂಪತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಬನವಾಸಿ ಪಿಎಸ್ಐಗಳಾದ ಮಹಾಂತಪ್ಪ ಕುಂಬಾರ ಹಾಗೂ ರವೀಂದ್ರ ಬಿರಾದಾರ ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವಿಧೆಡೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ವರದಿ: ಸುಧೀರ್ ನಾಯರ್, ಬನವಾಸಿ.


