Friday, July 24, 2026
Join WhatsApp Group
HomeCrimeಯಾರನ್ನೋ ನಂಬಿ ಬ್ಯಾಂಕ್‌ ವಿವರ ನೀಡುತ್ತೀರಾ?!

ಯಾರನ್ನೋ ನಂಬಿ ಬ್ಯಾಂಕ್‌ ವಿವರ ನೀಡುತ್ತೀರಾ?!

ಬೆಂಗಳೂರಿನಲ್ಲಿ ನಡೆದಿದೆ 7 ಕೋಟಿ ರೂ ವಂಚನೆ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಸುಮಾರು 7 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

ಬಂಧಿತನನ್ನು ಇ. ಆಯುಷ್ ಎಂದು ಗುರುತಿಸಲಾಗಿದೆ. ಆತ ಹೊಸಪೇಟೆ ಮೂಲದವನಾಗಿದ್ದು, ಬೆಂಗಳೂರು ನಗರದ ಬಗಲಗುಂಟೆ ಸಮೀಪದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ.

ಒಂದೇ ರಾತ್ರಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿರುವುದು ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ಪರಿಶೀಲನೆ ವೇಳೆ ಖಾತೆ ದುರುಪಯೋಗವಾಗಿದೆ ಎಂಬುದು ಸ್ಪಷ್ಟವಾಗಿದೆ. ಸುಮಾರು 7 ಕೋಟಿ ರೂ ಮೊತ್ತದ ಹಣದ ವಹಿವಾಟು ನಡೆದಿರುವುದನ್ನು ತಿಳಿದು ಖಾತೆದಾರ ವಿದ್ಯಾರ್ಥಿ ಬೆಚ್ಚಿಬಿದ್ದಿದ್ದಾನೆ.

ಬ್ಯಾಂಕ್ ಆಂತರಿಕ ಪರಿಶೀಲನೆ ವೇಳೆ ಹಣ ಸೈಬರ್ ವಂಚನೆಗೆ ಸಂಬಂಧಿಸಿದೆ ಎಂಬ ಸುಳಿವು ಸಿಕ್ಕಿದೆ. ನಂತರ ಸಂತ್ರಸ್ತ ವಿದ್ಯಾರ್ಥಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾನೆ. ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿ ಆಯುಷ್ ಅನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಆಯುಷ್ ಮತ್ತು ಸಂತ್ರಸ್ತ ವಿದ್ಯಾರ್ಥಿ ಕಾಲೇಜಿನಲ್ಲಿ ಸ್ನೇಹಿತರಾಗಿದ್ದರು. ಆಯುಷ್ ತನ್ನ ಬ್ಯಾಂಕ್ ಖಾತೆ ಫ್ರೀಜ್ ಆಗಿದೆ ಎಂದು ಹೇಳಿ, ತಾತ್ಕಾಲಿಕವಾಗಿ ಕೆಲವು ವಹಿವಾಟುಗಳಿಗೆ ಸ್ನೇಹಿತನ ಖಾತೆ ಬಳಸಲು ಮನವಿ ಮಾಡಿದ್ದಾನೆ.

ನಂಬಿಕೆ ಇಟ್ಟುಕೊಂಡು ಸಂತ್ರಸ್ತ ವಿದ್ಯಾರ್ಥಿ ತನ್ನ ಪಾಸ್‌ಬುಕ್‌, ಎಟಿಎಂ ಕಾರ್ಡ್‌, ಆನ್‌ಲೈನ್ ಬ್ಯಾಂಕಿಂಗ್ ವಿವರಗಳು ಹಾಗೂ ಖಾತೆಗೆ ಲಿಂಕ್ ಆಗಿದ್ದ ಸಿಮ್ ಕಾರ್ಡ್ ನೀಡಿದ್ದಾನೆ. ನಂತರ ಈ ವಿವರಗಳನ್ನು ಸೈಬರ್ ಅಪರಾಧಿಗಳಿಗೆ ಹಂಚಿ ದುರುಪಯೋಗ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯಲ್ಲಿ ಆಯುಷ್ ಟೆಲಿಗ್ರಾಮ್ ಆಪ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಸೈಬರ್ ಅಪರಾಧ ಜಾಲಕ್ಕೆ ಖಾತೆ ವಿವರಗಳನ್ನು ಕಮಿಷನ್ ಆಧಾರದ ಮೇಲೆ ಮಾರಾಟ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. “ಬ್ಯಾಂಕ್ ಖಾತೆ ಬಾಡಿಗೆಗೆ” ಎಂಬ ಜಾಹೀರಾತುಗಳ ಮೂಲಕ ಇಂತಹ ಜಾಲಗಳು ಯುವಕರನ್ನು ಬಲೆಗೆ ಬೀಳಿಸುತ್ತಿರುವುದು ಆತಂಕಕಾರಿ ವಿಷಯವಾಗಿದೆ.

ಪೊಲೀಸರು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಬ್ಯಾಂಕ್ ಖಾತೆ ವಿವರಗಳು, ಎಟಿಎಂ ಕಾರ್ಡ್‌, OTP, ಅಥವಾ ಸಿಮ್ ಕಾರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ. ಇಂತಹ ಅಜಾಗರೂಕತೆ ಗಂಭೀರ ಕಾನೂನು ಪರಿಣಾಮಗಳಿಗೆ ಕಾರಣವಾಗಬಹುದು!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share