Friday, October 23, 2026
HomeLocal Newsಜಿಲ್ಲಾಡಳಿತದ ಸೂಚನೆ ಮೀರಿ ಸಂಚರಿಸುತ್ತಿವೆ ಅತಿಭಾರದ ಲಾರಿಗಳು?!

ಜಿಲ್ಲಾಡಳಿತದ ಸೂಚನೆ ಮೀರಿ ಸಂಚರಿಸುತ್ತಿವೆ ಅತಿಭಾರದ ಲಾರಿಗಳು?!

ಕಾರವಾರ: ಕಾರವಾರ–ಕೈಗಾ ಮಾರ್ಗದಲ್ಲಿ 30 ಟನ್‌ಗಿಂತ ಹೆಚ್ಚಿನ ಭಾರದ ವಾಹನಗಳ ಸಂಚಾರದಿಂದ ರಸ್ತೆ ಹಾಳಾಗುವ ಅಪಾಯವಿದೆ ಎಂದು ಲೋಕೋಪಯೋಗಿ ಇಲಾಖೆ ವರದಿ ನೀಡಿದ್ದರೂ, ಇದೀಗ 45 ಟನ್‌ವರೆಗಿನ ಭಾರ ಹೊತ್ತ ಲಾರಿಗಳು ಸಂಚರಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾಡಳಿತ ವಿಧಿಸಿರುವ ಷರತ್ತುಗಳ ಉಲ್ಲಂಘನೆಯಾಗುತ್ತಿದೆ ಎಂಬ ಆಕ್ಷೇಪದ ನಡುವೆಯೇ, ರಸ್ತೆ ಸುರಕ್ಷತೆ ಮತ್ತು ಸ್ಥಳೀಯ ಲಾರಿ ಮಾಲೀಕರ ಹಿತಾಸಕ್ತಿಯ ಪ್ರಶ್ನೆಯೂ ಕೇಳಿಬರುತ್ತಿದೆ.

ಕಾರವಾರ–ಕೈಗಾ ರಸ್ತೆಯು ಅತಿಭಾರದ ವಾಹನಗಳ ಸಂಚಾರಕ್ಕೆ ಸೂಕ್ತವಲ್ಲ. ವಾಹನ ಮತ್ತು ಸರಕು ಸೇರಿ 30 ಟನ್‌ಗಿಂತ ಹೆಚ್ಚಿನ ಭಾರ ಹೊತ್ತ ವಾಹನಗಳ ಓಡಾಟಕ್ಕೆ ಈ ರಸ್ತೆ ಯೋಗ್ಯವಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆ ವರದಿ ಸಲ್ಲಿಸಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೇವಳಮಕ್ಕಿ–ಕೆರವಡಿ–ಬೋಳ್ವೆ–ಇರಾಪಾ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಡಳಿತ ಸೂಚನೆ ನೀಡಿತ್ತು.

ನಂತರ ಕೈಗಾ ಅಣು ವಿದ್ಯುತ್ ಸ್ಥಾವರದವರು ರಸ್ತೆ ನಿರ್ವಹಣೆಯ ಹೊಣೆ ಹೊತ್ತು ನವೀಕರಣ ಕಾಮಗಾರಿ ಆರಂಭಿಸಿರುವುದಾಗಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಷರತ್ತುಗಳೊಂದಿಗೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿತ್ತು ಎನ್ನಲಾಗಿದೆ. ಆದರೆ, ನಿಗದಿತ 30 ಟನ್ ಮಿತಿಯನ್ನು ಮೀರಿ 45 ಟನ್‌ವರೆಗಿನ ಭಾರ ಹೊತ್ತ ಲಾರಿಗಳು ಸಂಚರಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಭಾರೀ ವಾಹನಗಳ ಸಂಚಾರದಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ರಸ್ತೆ ಹಾಳಾದಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರದವರೇ ದುರಸ್ತಿ ಮಾಡಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಶಾಲಾ ಅವಧಿಯಲ್ಲಿ ಭಾರೀ ವಾಹನಗಳು ಸಂಚರಿಸಬಾರದು, ಸರಕು ಸಾಗಣೆ ವಾಹನಗಳ ಮೇಲೆ ಕಡ್ಡಾಯವಾಗಿ ಹೊದಿಕೆ ಅಳವಡಿಸಬೇಕು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರತಿದಿನ ವಾಹನಗಳ ಸಂಚಾರವನ್ನು ಪರಿಶೀಲಿಸಬೇಕು ಎಂಬ ನಿಬಂಧನೆಗಳೂ ಇವೆ.

ಇದರೊಂದಿಗೆ ದಿನಕ್ಕೆ ನಾಲ್ಕು ಬಾರಿ ಟ್ಯಾಂಕರ್‌ ಮೂಲಕ ನೀರು ತಂದು ರಸ್ತೆಗೆ ಸಿಂಪಡಿಸಿ ಉಳಿದ ವಾಹನ ಸವಾರರಿಗೆ ತೊಂದರೆಯಾಗದಂತೆ ನಿರ್ವಹಣೆ ಮಾಡಬೇಕು ಎಂದಿದ್ದರೂ ಈ ಸೂಚನೆ ಪಾಲನೆಯಾಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ.

ಆದರೆ, ಈ ಷರತ್ತುಗಳು ಮತ್ತು ನಿಬಂಧನೆಗಳು ಸಮರ್ಪಕವಾಗಿ ಪಾಲನೆಯಾಗುತ್ತಿವೆಯೇ ಎಂಬ ಪ್ರಶ್ನೆ ಎದುರಾಗಿದೆ. ಜಿಲ್ಲಾಡಳಿತದ ಸೂಚನೆಗಳಿದ್ದರೂ ಅಧಿಕ ಭಾರದ ವಾಹನಗಳ ಸಂಚಾರ ಮುಂದುವರಿದಿದ್ದರೆ, ಅದನ್ನು ತಡೆಯುವ ಹೊಣೆ ಯಾರದ್ದು ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ.

ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ಬೃಹತ್ ನಿರ್ಮಾಣ ಕಾಮಗಾರಿಗೆ ಜಿಲ್ಲೆಯ ಜನರು ಭೂಮಿ ಮತ್ತು ಪರಿಸರವನ್ನು ತ್ಯಾಗ ಮಾಡಿದ್ದಾರೆ. ಆದರೆ, ಯೋಜನೆಯ ಮುಖ್ಯ ಗುತ್ತಿಗೆದಾರರು ಸಿವಿಲ್ ಕಾಮಗಾರಿಗಳಿಗೆ ಅಗತ್ಯವಿರುವ ಜಲ್ಲಿ ಹಾಗೂ ಸಾರಿಗೆ ಲಾರಿಗಳನ್ನು ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಂದ ತರಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಸ್ಥಳೀಯ ಉದ್ಯಮಿಗಳು, ಲಾರಿ ಮಾಲೀಕರು ಮತ್ತು ಚಾಲಕರಿಗೆ ಅನ್ಯಾಯವಾಗುತ್ತಿದೆ ಎನ್ನಲಾಗಿದೆ.

ಸ್ಥಳೀಯರಿಗೆ ಶೇ.80ರಷ್ಟು ಸಾರಿಗೆ ಮತ್ತು ಕಚ್ಚಾ ವಸ್ತು ಪೂರೈಕೆಯ ಅವಕಾಶವನ್ನು ಕಡ್ಡಾಯಗೊಳಿಸಬೇಕು ಹಾಗೂ ಸೂಕ್ತ ದರ ನಿಗದಿಪಡಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದರೂ, ಈ ಬಗ್ಗೆ ಅಗತ್ಯ ಗಮನ ಹರಿಸಲಾಗುತ್ತಿಲ್ಲ ಎಂಬ ಆಕ್ಷೇಪವೂ ವ್ಯಕ್ತವಾಗಿದೆ.

ಒಂದೆಡೆ ರಸ್ತೆ ಹಾನಿ ಮತ್ತು ಸಂಚಾರ ಸುರಕ್ಷತೆಯ ಆತಂಕ, ಮತ್ತೊಂದೆಡೆ ಸ್ಥಳೀಯರಿಗೆ ಉದ್ಯೋಗ ಹಾಗೂ ಸಾರಿಗೆ ವಹಿವಾಟಿನಲ್ಲಿ ಆದ್ಯತೆ ನೀಡಬೇಕೆಂಬ ಬೇಡಿಕೆಯ ವಿಚಾರಗಳಲ್ಲಿ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share