ಯಲ್ಲಾಪುರ: ಭಕ್ತಿ ಎನ್ನುವುದು ನಂಬಿಕೆಯ ಜೊತೆಗೆ ಭಾವನೆಯೂ ಹೌದು. ತಾನು ನಂಬಿದ ದೇವರಲ್ಲಿ ಸಂಕಷ್ಟ ಹೇಳಿಕೊಂಡು ದಾರಿ ತೋರುವಂತೆ ಪ್ರಾರ್ಥಿಸುವ ಭಕ್ತನಿಗೆ ಅನಿರೀಕ್ಷಿತವಾಗಿ ಸಂತಸದ ಸುದ್ದಿ ಸಿಕ್ಕರೆ ಆ ಕ್ಷಣದ ಖುಷಿಯೇ ಬೇರೆ!
ತಾಲೂಕಿನ ಬಳಗಾರಿನ ಕಬ್ಬಿನಕುಂಬ್ರಿಯ ಶ್ರೀಧರ ಗಂಗಾಧರ ಹಳೆಮನೆ ಅವರು ಶ್ರೀ ದತ್ತ ಹಾಗೂ ಶ್ರೀಧರ ಸ್ವಾಮಿಗಳ ಭಕ್ತರು. ಸೋಮವಾರ ಭೂಮಿ ಹುಣ್ಣಿಮೆಯ ಅಂಗವಾಗಿ ನಾಯ್ಕನಕೆರೆಯ ಶ್ರೀ ದತ್ತಮಂದಿರದಲ್ಲಿ ಸತ್ಯದತ್ತ ವ್ರತ ಹಾಗೂ ಅನ್ನದಾನ ಸೇವೆಯನ್ನು ಹಮ್ಮಿಕೊಂಡಿದ್ದರು.
ಆದರೆ, ಇದೇ ವೇಳೆ ಅವರ ಕೊಟ್ಟಿಗೆಯಲ್ಲಿದ್ದ ಗರ್ಭಿಣಿ ಹಸುವಿನ ಆರೋಗ್ಯದಲ್ಲಿ ಏರುಪೇರಾಗಿತ್ತು. ಕರು ಜನಿಸಲು ಇನ್ನೂ ಒಂದು ವಾರಕ್ಕೂ ಹೆಚ್ಚು ಸಮಯ ಬೇಕಾಗಬಹುದು, ಅಲ್ಲಿಯವರೆಗೆ ಎಚ್ಚರಿಕೆಯಿಂದ ಆರೈಕೆ ಮಾಡಬೇಕು ಎಂದು ಪಶುವೈದ್ಯರು ಸೂಚಿಸಿದ್ದರು.
ಒಂದೆಡೆ ದತ್ತಮಂದಿರದಲ್ಲಿ ತಾವು ಸಂಕಲ್ಪಿಸಿದ್ದ ಪೂಜೆ ಮತ್ತು ಅನ್ನದಾನ ಸೇವೆ, ಮತ್ತೊಂದೆಡೆ ಇಂತಹ ಸಂದರ್ಭ… ಯಾವುದಕ್ಕೆ ಆದ್ಯತೆ ನೀಡಬೇಕು ಎಂಬ ಗೊಂದಲ ಶ್ರೀಧರ ಹಳೆಮನೆಯವರನ್ನು ಕಾಡಿತು. ಪೂಜೆಯನ್ನು ಕೈಬಿಡುವುದಕ್ಕೂ ಮನಸ್ಸಿಲ್ಲ, ಹಸುವನ್ನು ಬಿಟ್ಟು ಹೋಗುವುದಕ್ಕೂ ಸಾಧ್ಯವಿಲ್ಲ ಎಂಬ ಸಂದಿಗ್ಧ ಪರಿಸ್ಥಿತಿ ಎದುರಾಗಿತ್ತು.
ಈ ಸಂದರ್ಭದಲ್ಲಿ ದತ್ತನನ್ನು ಭಕ್ತಿಯಿಂದ ಸ್ಮರಿಸಿದ ಅವರು, ‘ನನ್ನಿಂದ ಯಾವುದನ್ನೂ ಬಿಡಲಾಗುತ್ತಿಲ್ಲ. ನೀನೇ ದಾರಿ ತೋರಿಸು’ ಎಂದು ಪ್ರಾರ್ಥಿಸಿ, ಪೂಜೆಗೆ ಬೇರೆಯವರನ್ನು ಕಳುಹಿಸುವ ನಿರ್ಧಾರಕ್ಕೆ ಬಂದರು.
ಅಚ್ಚರಿಯೆಂಬಂತೆ, ಹಸು ಎರಡು ಆರೋಗ್ಯಕರ ಕರುಗಳಿಗೆ ಜನ್ಮ ನೀಡಿತು. ಇದರಿಂದ ಹಳೆಮನೆಯವರ ಆತಂಕ ದೂರವಾಗಿ ಸಂತಸ ಮನೆಮಾಡಿತು. ತಮ್ಮ ಕಷ್ಟದ ಸಮಯದಲ್ಲಿ ದತ್ತನನ್ನು ಮೊರೆಹೋದ ತಮಗೆ ಈ ಘಟನೆ ವಿಶೇಷ ಅನುಭವ ನೀಡಿದೆ ಎಂಬ ಭಾವನೆ ಅವರಲ್ಲಿ ಮೂಡಿದೆ.
ನಾಯ್ಕನಕೆರೆಯ ಶ್ರೀ ದತ್ತಮಂದಿರವು ಅವಧೂತ ಗಣೇಶ ಆಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದು, ಶಿವಾನಂದ ಸ್ವಾಮಿಗಳಿಂದ ಪೂಜಿಸಲ್ಪಟ್ಟ ಕ್ಷೇತ್ರವೆಂದು ಭಕ್ತರು ನಂಬುತ್ತಾರೆ. ಪ್ರಸ್ತುತ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಯವರ ಅನುಗ್ರಹದಲ್ಲಿ ಕ್ಷೇತ್ರದ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿವೆ.
ಹಸುವಿನ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದ ಭಕ್ತನಿಗೆ ಜೋಡಿ ಕರುಗಳ ಜನನ ಸಂತಸ ತಂದಿದೆ. ಈ ಘಟನೆಯನ್ನು ಶ್ರೀಧರ ಹಳೆಮನೆಯವರು ದತ್ತನ ಅನುಗ್ರಹವೆಂದು ಭಾವಿಸಿ, ಭಕ್ತಿಯಿಂದ ಸ್ಮರಿಸಿದ್ದಾರೆ.


