ಯಲ್ಲಾಪುರ: ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕೆಂದು ಒತ್ತಾಯಿಸುತ್ತಿದ್ದ ಕಾಂಗ್ರೆಸ್‌ಗೆ, ಅದೇ ಮಾದರಿಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಈಗ ಈ ಸೋಲಿಗೆ ಯಾರನ್ನು ಹೊಣೆ ಮಾಡಲಾಗುತ್ತದೆ ಎಂದು ಬಿಜೆಪಿ ಹಿರಿಯ ಮುಖಂಡ ರಾಮು ನಾಯ್ಕ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇವಿಎಂ ವ್ಯವಸ್ಥೆ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್, ಹಳೆಯ ಬ್ಯಾಲೆಟ್ ಪೇಪರ್ ಪದ್ಧತಿಯಲ್ಲೇ ಚುನಾವಣೆ ನಡೆಸಬೇಕೆಂದು ಚುನಾವಣಾ ಆಯೋಗದ ಮೇಲೆ ಒತ್ತಡ ತಂದಿತ್ತು. ಆದರೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆದರೂ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್‌ಗೆ ನಾಲ್ಕು ಎಂಎಲ್‌ಸಿ ಸ್ಥಾನಗಳಲ್ಲಿ ಒಂದನ್ನೂ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಟೀಕಿಸಿದ್ದಾರೆ.
ಇವಿಎಂ, ಬಿಜೆಪಿ ಮತ್ತು ಚುನಾವಣಾ ಆಯೋಗವನ್ನು ದೂಷಿಸುವ ಅವಕಾಶ ಇಲ್ಲದಿರುವಾಗ, ಈಗ ಕಾಂಗ್ರೆಸ್ ಯಾರನ್ನು ಹೊಣೆ ಮಾಡಲಿದೆ? ಮತದಾರರನ್ನೇ ದೂಷಿಸಲಿದೆಯೇ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವನ್ನು ಉಲ್ಲೇಖಿಸಿರುವ ರಾಮು ನಾಯ್ಕ, ʻಇವಿಎಂ ಮತ್ತು ಬ್ಯಾಲೆಟ್ ನಡುವಿನ ವ್ಯತ್ಯಾಸ ಇಷ್ಟೇ. ಇವಿಎಂ ಆಗಿದ್ದರೆ ಬೆಳಿಗ್ಗೆಯೇ ಸೋಲುತ್ತಿದ್ದರು, ಬ್ಯಾಲೆಟ್ ಪೇಪರ್ ಆಗಿದ್ದರಿಂದ ಸಂಜೆ ಸೋತಿದ್ದಾರೆ ಅಷ್ಟೇʼ ಎಂಬ ವ್ಯಂಗ್ಯಭರಿತ ಹೇಳಿಕೆಯನ್ನು ಪ್ರಸ್ತಾಪಿಸಿದ್ದಾರೆ.
ಚುನಾವಣೆ ಯಾವುದೇ ಪದ್ಧತಿಯಲ್ಲಿ ನಡೆದರೂ ಮತದಾರರ ತೀರ್ಪು ಪಕ್ಷದ ವಿರುದ್ಧವಾಗಿದ್ದರೆ ಸೋಲನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ಟೀಕಿಸಿದ್ದಾರೆ.


