Wednesday, October 28, 2026
HomeLocal Newsಬೇಡ್ತಿ–ವರದಾ ಯೋಜನೆಗೆ ಇನ್ನೆಷ್ಟು ವಿಳಂಬ?; ಸಂಸದ ಬೊಮ್ಮಾಯಿ ಗರಂ!

ಬೇಡ್ತಿ–ವರದಾ ಯೋಜನೆಗೆ ಇನ್ನೆಷ್ಟು ವಿಳಂಬ?; ಸಂಸದ ಬೊಮ್ಮಾಯಿ ಗರಂ!

ಹಾವೇರಿ: ಬೇಡ್ತಿ ನದಿಯ ನೀರು ವರದಾ ನದಿಗೆ ಹರಿಸುವ ಯೋಜನೆ ಕೇವಲ ಚರ್ಚೆಯಲ್ಲೇ ಉಳಿಯಬಾರದು. ಈಗಾಗಲೇ ಒಪ್ಪಂದವಾಗಿರುವಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ಕಾಮಗಾರಿ ಆರಂಭಿಸಬೇಕು. ರಾಜ್ಯ ಸರ್ಕಾರ ಈ ವಿಚಾರದಲ್ಲಿ ವಿಳಂಬ ಮುಂದುವರಿಸಿದರೆ ಬೃಹತ್ ಹೋರಾಟಕ್ಕೆ ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಯೋಜನೆಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಸಮಯ ಕೇಳಿ ಪತ್ರ ಬರೆದಿದ್ದರೂ ಈವರೆಗೆ ಉತ್ತರ ಬಂದಿಲ್ಲ ಎಂಬುದು ಬೊಮ್ಮಾಯಿ ಅವರ ಅಸಮಾಧಾನ. ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಸಂಪನ್ಮೂಲ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಮ್ಮ ಅವಧಿಯಲ್ಲೇ ಡಿಪಿಆರ್ ಸಿದ್ಧಪಡಿಸಿ ಯೋಜನೆಯನ್ನು ಜಾರಿಗೊಳಿಸುವ ಅವಕಾಶವಿದೆ. ಅದನ್ನು ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಯೋಜನೆಯ ಪ್ರಸ್ತಾಪ ಇತ್ತೀಚಿನದ್ದಲ್ಲ. 1980ರಲ್ಲಿ ರೂಪಿಸಲಾದ ರಾಷ್ಟ್ರೀಯ ನದಿ ಜೋಡಣೆ ದೃಷ್ಟಿಕೋನ ಯೋಜನೆಯಲ್ಲೇ ಬೇಡ್ತಿ–ವರದಾ ನದಿ ಜೋಡಣೆ ಸ್ಥಾನ ಪಡೆದಿತ್ತು. ಯೋಜನೆಗೆ ಸಂಬಂಧಿಸಿದ ಪರಿಸರದ ಪ್ರಶ್ನೆಗಳನ್ನೂ ಕಡೆಗಣಿಸಬಾರದು ಎಂಬುದು ಅವರ ಮಾತಿನ ಮತ್ತೊಂದು ಭಾಗ.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಬರೆದ ಪತ್ರದಲ್ಲಿ ಪರಿಸರ ಹಾನಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಪ್ರಸ್ತಾಪವಾಗಿವೆ. ಯೋಜನೆಯ ಪರಿಸರ ಮತ್ತು ಪರಿಸರ ವಿಜ್ಞಾನದ ಪರಿಣಾಮಗಳ ಕುರಿತು ವ್ಯಕ್ತವಾಗಿರುವ ಆಕ್ಷೇಪಗಳಿಗೆ ಉತ್ತರ ನೀಡುವ ಜೊತೆಗೆ, ಈ ಭಾಗದ ಜನರ ಬೇಡಿಕೆ, ಬರ ಪರಿಸ್ಥಿತಿ ಹಾಗೂ ಪರಿಸರದ ಎಲ್ಲ ಆಯಾಮಗಳನ್ನು ಒಟ್ಟಾಗಿ ಅಧ್ಯಯನ ಮಾಡಬೇಕಿದೆ ಎಂದು ಬೊಮ್ಮಾಯಿ ಹೇಳಿದರು.

ಯೋಜನೆಯ ಕಾರ್ಯಸಾಧ್ಯತಾ ವರದಿಗೆ ಕೇಂದ್ರ ಜಲ ಆಯೋಗ ಈಗಾಗಲೇ ಒಪ್ಪಿಗೆ ನೀಡಿದೆ. 2025ರ ಆಗಸ್ಟ್ 12ರಂದು ಡಿಪಿಆರ್ ಸಿದ್ಧಪಡಿಸಲು ಒಡಂಬಡಿಕೆಯೂ ಆಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಎಂಜಿನಿಯರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಈ ಒಪ್ಪಂದದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.

ಹೀಗಿರುವಾಗ ಡಿಪಿಆರ್‌ನಲ್ಲಿ ಕುಡಿಯುವ ನೀರು, ಕೃಷಿ ಬಳಕೆ, ನದಿಯಲ್ಲಿರುವ ನೀರಿನ ಲಭ್ಯತೆ, ಪರಿಸರದ ಮೇಲಿನ ಪರಿಣಾಮ ಮತ್ತು ಮುಳುಗಡೆಯಾಗಬಹುದಾದ ಅರಣ್ಯ ಪ್ರದೇಶದ ಕುರಿತು ಸಮಗ್ರ ಮಾಹಿತಿ ಇರಬೇಕು. ಡ್ರೋನ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಬಳಸಿ ಸಮೀಕ್ಷೆ ನಡೆಸಿ, ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಯೋಜನೆಯನ್ನು ರೂಪಿಸಬೇಕು ಎಂಬುದು ಅವರ ಆಗ್ರಹ.

ಬೇಡ್ತಿ ನದಿಯಲ್ಲಿ ಮಳೆಗಾಲ ಹಾಗೂ ಪ್ರವಾಹದ ಸಂದರ್ಭದಲ್ಲಿ ಹರಿಯುವ ನೀರಿನ ಶೇ.10ರಷ್ಟನ್ನು ಮಾತ್ರ ಯೋಜನೆಗೆ ಬಳಸಿಕೊಳ್ಳುವ ಪ್ರಸ್ತಾವವಿದೆ. ಉಳಿದ ಶೇ.90ರಷ್ಟು ನೀರು ಸಹಜವಾಗಿ ಹರಿಯಲಿದೆ. ಪಂಪ್‌ಹೌಸ್ ಮತ್ತು ಪೈಪ್‌ಲೈನ್ ನಿರ್ಮಾಣಕ್ಕೆ ಮಾತ್ರ ಭೂಮಿ ಅಗತ್ಯವಿದೆ ಎಂದು ಬೊಮ್ಮಾಯಿ ತಿಳಿಸಿದರು.

ಬರಪೀಡಿತ ಜಿಲ್ಲೆಗಳ ಭವಿಷ್ಯದ ದೃಷ್ಟಿಯಿಂದ ಯೋಜನೆ ಮಹತ್ವದ್ದಾಗಿದೆ ಎಂದು ಪ್ರತಿಪಾದಿಸಿದ ಅವರು, ಹಾವೇರಿಯ ಹುಕ್ಕೇರಿ ಮಠದ ಶ್ರೀಗಳ ನೇತೃತ್ವದಲ್ಲಿ ಈಗಾಗಲೇ ಸಮಿತಿ ರಚನೆಯಾಗಿದೆ ಎಂದರು.

ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿ ಹೋರಾಟ ಸಮಿತಿ ರಚಿಸಿಕೊಂಡು ಯೋಜನೆ ಜಾರಿಗೆ ಒತ್ತಾಯಿಸಬೇಕು. ಸರ್ಕಾರ ವಿಳಂಬ ಮಾಡಿದರೆ ಬೃಹತ್ ಆಂದೋಲನ ನಡೆಸಲು ತಾವು ನೇತೃತ್ವ ವಹಿಸಲು ಸಿದ್ಧ ಎಂದು ಎಚ್ಚರಿಸಿದರು. ಹಾವೇರಿ ಜಿಲ್ಲೆಗೆ ಪ್ರತ್ಯೇಕ ಅಣೆಕಟ್ಟು ನಿರ್ಮಿಸಬೇಕೆಂಬ ಬೇಡಿಕೆಯೂ ಇದೆ. ರಾಜ್ಯ ಸರ್ಕಾರ ಡಿಪಿಆರ್ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಮತ್ತಷ್ಟು ವಿಳಂಬ ಮಾಡದೆ ತ್ವರಿತವಾಗಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad

Most Popular

Recent Comments

error: Content is protected !!
Share