ಯಲ್ಲಾಪುರ: ಬೇಡ್ತಿ-ಅಘನಾಶಿನಿ ನದಿ ಉಳಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಉದ್ದೇಶದಿಂದ ಹಾಗೂ ಸಸಿ ನೆಡುವ ಮೂಲಕ ನದಿಗಳ ಸಂರಕ್ಷಣೆಯ ಪ್ರತಿಜ್ಞೆ ಕೈಗೊಳ್ಳುವ ನಿಟ್ಟಿನಲ್ಲಿ ಜೂನ್ 10ರಂದು ನಡೆಯಲಿರುವ ವೃಕ್ಷಾರೋಪಣ ಮತ್ತು ಹಸಿರು ಸಭೆಯ ಪೂರ್ವಭಾವಿ ಸಭೆ ಶುಕ್ರವಾರ ಬೇಡ್ತಿ ನದಿ ತಟದ ಹೊಳೆಹುಲಿಯಪ್ಪ ಸಮೀಪದಲ್ಲಿ ನಡೆಯಿತು.
ಜೂನ್ 10ರಂದು ಸಂಜೆ 4 ಗಂಟೆಗೆ ಬೇಡ್ತಿ ನದಿ ಸೇತುವೆ ಸಮೀಪದ ಹೊಳೆಹುಲಿಯಪ್ಪ ಬಳಿ ವೃಕ್ಷಾರೋಪಣ ಕಾರ್ಯಕ್ರಮ ಹಾಗೂ ಹಸಿರು ಸಭೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀಗಳ ಆಗಮನ, ಪೂರ್ಣಕುಂಭ ಸ್ವಾಗತ, ವೇದಿಕೆ ನಿರ್ಮಾಣ, ಸ್ವಚ್ಛತೆ, ವಾಹನ ನಿಲುಗಡೆ ವ್ಯವಸ್ಥೆ, ವೃಕ್ಷಾರೋಪಣ ವ್ಯವಸ್ಥೆ, ಪ್ರಚಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿ ಕಾರ್ಯಯೋಜನೆ ರೂಪಿಸಲಾಯಿತು.
ಸಭೆಯಲ್ಲಿ ಮಳಲಗಾಂವ್, ಮಂಚಿಕೇರಿ, ಹಾಸಣಗಿ, ಉಪಳೇಶ್ವರ, ಚಂದಗುಳಿ, ನಂದೊಳ್ಳಿ, ಕಂಪ್ಲಿ ಹಾಗೂ ಹುತ್ಕಂಡ ಭಾಗಗಳ ಜನರು, ಕಾರ್ಯಕರ್ತರು ಮತ್ತು ಪ್ರಮುಖರು ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡಿದರು.
ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಸ್ವಾಗತಿಸಿ, ಕಾರ್ಯಕ್ರಮದ ರೂಪುರೇಷೆ ಹಾಗೂ ಉದ್ದೇಶಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ರಾಘವ ಭಟ್ಟ (ಹಾಸಣಗಿ), ಎಂ.ಕೆ. ಭಟ್ಟ (ಯಡಳ್ಳಿ), ಟಿ.ಆರ್. ಹೆಗಡೆ, ಗೋಪಾಲಕೃಷ್ಣ ಭಟ್ಟ, ಗಜಾನನ ಬೂರ್ಮನೆ, ರಘುಪತಿ ಕಂಪ್ಲಿ, ಸುಬ್ಬಣ್ಣ ಉದ್ದಾಬೈಲ್, ಸುಬ್ಬಣ್ಣ ದಾನ್ಯಾಕೊಪ್ಪ, ರಾಮಕೃಷ್ಣ ಭಟ್ಟ (ಮಳಲಗಾಂವ್), ನರಸಿಂಹ ಭಾಗ್ವತ್, ಸುಬ್ರಾಯ ಭಾಗ್ವತ್, ಶ್ರೀಧರ ಭಟ್ಟ, ಶ್ರೀಕಾಂತ ಭಾಗ್ವತ್, ಗಣಪತಿ ಶಂಕರಗದ್ದೆ, ಸುರೇಶ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.