Ad
Ad
Ad
Home Local News ಬೇಡ್ತಿ–ವರದಾ ತಿರುವಿಗೆ ಬ್ರೇಕ್ ಹಾಕಲು ಜನಜಾಗೃತಿ

ಬೇಡ್ತಿ–ವರದಾ ತಿರುವಿಗೆ ಬ್ರೇಕ್ ಹಾಕಲು ಜನಜಾಗೃತಿ

0
8

ಯಲ್ಲಾಪುರ: ಜಿಲ್ಲೆಯ ಪ್ರಕೃತಿ ಸಂಪತ್ತಿನ ರಕ್ಷಣೆಗಾಗಿ ಸ್ವರ್ಣವಲ್ಲಿ ಶ್ರೀಗಳು ದಶಕಗಳಿಂದ ಹೋರಾಟ ನಡೆಸಿದ್ದಾರೆ. ಅವರ ಪ್ರಯತ್ನದಿಂದಲೇ ನಮ್ಮ ಭಾಗದಲ್ಲಿ ಅಳಿದುಳಿದಿರುವ ಹಸಿರನ್ನು ಕಾಣಲು ಸಾಧ್ಯವಾಗಿದೆ. ಮುಂದಾಲೋಚನೆಯಿಲ್ಲದ ನದಿ ತಿರುವು ಯೋಜನೆಯಿಂದ ಜನರ ತೆರಿಗೆ ಹಣ ವ್ಯರ್ಥವಾಗಬಾರದು ಎಂದಾದರೆ ಈ ಯೋಜನೆಯನ್ನು ತಡೆಯಲು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಸಮಿತಿಯ ಸಂಚಾಲಕ ವೆಂಕಟರಮಣ ಬೆಳ್ಳಿ ಹೇಳಿದರು.

Ad

ಬೇಡ್ತಿ–ವರದಾ ನದಿ ತಿರುವು ಯೋಜನೆ ವಿರೋಧಿಸಿ ನವೆಂಬರ್ 3ರಂದು ನಡೆಯಲಿರುವ ರಸ್ತೆ ತಡೆ ಹೋರಾಟದ ಕುರಿತು ದೇಹಳ್ಳಿ, ಆನಗೋಡಿನಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಸುಮಾರು ಮೂರು ದಶಕಗಳ ಹಿಂದೆ ಬಿಸಗೋಡ–ತಳಕೆಬೈಲ್ ಪ್ರದೇಶದಲ್ಲಿ ಎಂಎಂಎಲ್ ಸಂಸ್ಥೆಯಿಂದ ಮ್ಯಾಂಗನೀಸ್ ಗಣಿಗಾರಿಕೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಅಂದಿನ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಸುರೇಶ್ ಪ್ರಭು ಅವರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಗಿತ್ತು.

ಬಳಿಕ ಸ್ವರ್ಣವಲ್ಲಿ ಮಠದಲ್ಲಿ ನಡೆದ ಸಭೆಯಲ್ಲಿ ಗಣಿಗಾರಿಕೆ ಯೋಜನೆಯನ್ನು ಶಾಶ್ವತವಾಗಿ ಕೈಬಿಡುವ ನಿರ್ಧಾರ ಕೈಗೊಳ್ಳಲಾಯಿತು. ಅಂದು ಸ್ವರ್ಣವಲ್ಲಿ ಶ್ರೀಗಳು ಮಧ್ಯಪ್ರವೇಶಿಸದಿದ್ದರೆ ಯಲ್ಲಾಪುರ ತಾಲೂಕು ಕೂಡ ಗಣಿಗಾರಿಕೆಯಿಂದ ಪರಿಸರ ಹಾನಿ ಅನುಭವಿಸಬೇಕಾಗಿತ್ತು. ಕೃಷಿ ಭೂಮಿಯೂ ಸರ್ವನಾಶವಾಗುವ ಅಪಾಯವಿತ್ತು ಎಂದು ಬೆಳ್ಳಿ ಸ್ಮರಿಸಿದರು.

ಗುರುಗಳು ಶಿಷ್ಯರ ಮತ್ತು ನಾಡಿನ ಕಲ್ಯಾಣಕ್ಕಾಗಿ ನಡೆಸಿದ ಹೋರಾಟದ ಲಾಭವನ್ನು ನಾವಿಂದು ಪಡೆದುಕೊಳ್ಳುತ್ತಿದ್ದೇವೆ. ನೀರಿನ ಲಭ್ಯತೆಯ ಬಗ್ಗೆ ಖಚಿತತೆ ಇಲ್ಲದ ನದಿ ಜೋಡಣೆ ಯೋಜನೆಯಿಂದ ರೈತರಿಗೆ ಯಾವ ರೀತಿಯ ಲಾಭವಾಗಲಿದೆ ಎಂಬುದು ಸ್ಪಷ್ಟವಿಲ್ಲ.

ಕೆರೆ ತುಂಬಿಸುವ ಹಾಗೂ ಕುಡಿಯುವ ನೀರಿನ ಹೆಸರಿನಲ್ಲಿ ಈಗಾಗಲೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದೆ. ಆದರೆ, ಈ ಯೋಜನೆಗಳಿಗೆ ನೀರಿನ ಮೂಲ ಯಾವುದು ಎಂಬ ಬಗ್ಗೆ ಖಚಿತತೆ ಬೇಕಿದೆ. ಇಂತಹ ಯೋಜನೆಗಳು ಭವಿಷ್ಯದಲ್ಲಿ ಯಲ್ಲಾಪುರಕ್ಕೆ ನೀರು ಪೂರೈಸುವ ಬೇಡ್ತಿ ಯೋಜನೆಗಳ ಸಾಲಿಗೆ ಸೇರುವ ಆತಂಕವಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ನಾರಾಯಣ ಭಟ್ ಅಗ್ಗಾಶಿಕುಂಬ್ರಿ ಮಾತನಾಡಿ, ಗುರುಗಳು ಭವಿಷ್ಯದ ಹಿತದೃಷ್ಟಿಯಿಂದಲೇ ಹೋರಾಟದ ಕಹಳೆ ಮೊಳಗಿಸಿದ್ದಾರೆ. ನವರಾತ್ರಿಯಲ್ಲಿ ಶಕ್ತಿಯನ್ನು ಆರಾಧಿಸುವಂತೆ, ಪ್ರಕೃತಿ ಮತ್ತು ನಾಡಿನ ರಕ್ಷಣೆಗಾಗಿ ನಡೆಯುವ ಈ ಜನಜಾಗೃತಿ ಹೋರಾಟವೂ ಸಾಮೂಹಿಕ ಶಕ್ತಿಯ ಆರಾಧನೆಯಾಗಿದೆ. ನವೆಂಬರ್ 3ರಂದು ನಡೆಯುವ ರಸ್ತೆ ತಡೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಮಿತಿಯ ಸಂಚಾಲಕರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಘವೇಂದ್ರ ಭಟ್, ನರಸಿಂಹ ಸಾತೋಡ್ಡಿ ಹಾಗೂ ವೆಂಕಟರಮಣ ಭಟ್ ಕಿರಕುಂಭತ್ತಿ ಹೋರಾಟದ ರೂಪುರೇಷೆಗಳ ಕುರಿತು ಮಾತನಾಡಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಹಳೆಮನೆ ಸ್ವಾಗತಿಸಿದರು. ವಿಘ್ನೇಶ್ವರ ಕಟ್ಟೆಗದ್ದೆ ವಂದನಾರ್ಪಣೆ ಮಾಡಿದರು. ಸಭೆಯಲ್ಲಿ ಗಣಪತಿ ಮನಿಗದ್ದೆ, ರವಿ ಭಟ್ ವಡ್ರಮನೆ, ಜಿ.ಎಸ್. ಭಟ್, ಪತ್ರಕರ್ತ ಕೆ.ಎಸ್. ಭಟ್ ಆನಗೋಡು, ದತ್ತಾತ್ರೇಯ ಬೋಳಗುಡ್ಡೆ, ಶ್ರೀರಾಮ ಲಾಲಗುಳಿ, ರಾಮಕೃಷ್ಣ ಗಾಂವ್ಕರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕೆ.ಟಿ. ಹೆಗಡೆ ಸ್ವಾಗತಿಸಿದರು. ಕೆ.ಎಸ್. ಭಟ್ ಆನಗೋಡು ವಂದನಾರ್ಪಣೆ ಮಾಡಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!