ಶಿರಸಿ: ನಗರದ ಮುಸ್ಲಿಂ ಗಲ್ಲಿ ರಸ್ತೆಯ ಬಳಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಬಂಗಾರದ ಹವಳದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಂತರರಾಜ್ಯ ಚೈನ್ ಸ್ನ್ಯಾಚಿಂಗ್ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಇರಾನಿ ಗ್ಯಾಂಗ್ನ ಸಕ್ರಿಯ ಸದಸ್ಯನನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಗುಂಟಕಲ್ ನಿವಾಸಿ ಸೈಯ್ಯದ್ ಇಮ್ರಾನ್ (24) ಬಂಧಿತ ಆರೋಪಿ. ಬೈಕ್ ಮೆಕ್ಯಾನಿಕ್ ಆಗಿರುವ ಈತ ಹಲವು ರಾಜ್ಯಗಳಲ್ಲಿನ ಚೈನ್ ಸ್ನ್ಯಾಚಿಂಗ್ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅ. 8ರಂದು ಬೆಳಗ್ಗೆ ಸುಮಾರು 8.20ರ ವೇಳೆಗೆ ಶಿರಸಿಯ ಮುಸ್ಲಿಂ ಗಲ್ಲಿ ರಸ್ತೆಯ ಬಳಿ ದೂರುದಾರರು ನಡೆದುಕೊಂಡು ಹೋಗುತ್ತಿದ್ದಾಗ, ಕಪ್ಪು ಬಣ್ಣದ ಮೋಟಾರ್ ಸೈಕಲ್ನಲ್ಲಿ ಬಂದ ಇಬ್ಬರು ಅಪರಿಚಿತರಲ್ಲಿ ಒಬ್ಬಾತ ಕೊರಳಲ್ಲಿದ್ದ ಬಂಗಾರದ ಹವಳದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ.
ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು.
ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿದ ತಂಡ, ಖಚಿತ ಮಾಹಿತಿ ಆಧರಿಸಿ ಅ. 15ರಂದು ಆಂಧ್ರಪ್ರದೇಶದಲ್ಲಿ ಸೈಯ್ಯದ್ ಇಮ್ರಾನ್ನನ್ನು ಬಂಧಿಸಿದೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಟಿವಿಎಸ್ ರೈಡರ್ ಮೋಟಾರ್ ಸೈಕಲ್ನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ವ್ಯಕ್ತಿಯ ಪತ್ತೆ ಹಾಗೂ ಕಳವಾದ ಸರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಶಿರಸಿ ವೃತ್ತ ನಿರೀಕ್ಷಕ ಸಂಪತ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.
ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಬಸವರಾಜ್ ಕನಶೆಟ್ಟಿ, ಗೀತಾ ಕಲಘಟಗಿ , ನರಸಿಂಹಲು ಅವರ ನೇತೃತ್ವದಲ್ಲಿ ಅಪರಾದ ವಿಭಾಗ ಸಿಬ್ಬಂದಿಯವರಾದ ಕೋಟೆಶ ನಾಗರವಳ್ಳಿ, ಸಂದೀಪ ನಿಂಬಾಯಿ, ಅರುಣ ಎಮ್ ಎಲ್, ರಾಕೇಶ ಎನ್ ಹೆಚ್, ಬಸವರಾಜ ಹಗರಿ, ಹನುಮಂತ ಮಾಕಾಪೂರ, ರಾಮಯ್ಯ ಪೂಜಾರಿ, ಲಕ್ಷ್ಮಣ, ಪ್ರಸಾದ ಮಡಿವಾಳ, ಮಹಾದೇವ, ಶಿವಾನಂದ, ಸದ್ದಾಂ, ಪ್ರಶಾಂತ, ಚಂದ್ರಪ್ಪ, ಬಸವರಾಜ ಜಾಡರ, ಮಂಜುನಾಥ ಕಾಶಿಕೊವಿ, ಚಾಲಕ ಮಾರುತಿ ಅವರು ಭಾಗವಹಿಸಿ ಆರೋಪಿತರನ್ನು ವಶಕ್ಕೆ ಪಡೆಯಲು ಸಹಕರಿಸಿದರು.
ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


