ಅಂಕೋಲಾ: ಪರವಾನಗಿ ಇಲ್ಲದಿದ್ದರೂ ಲಾಭದ ಲೆಕ್ಕ ಮಾತ್ರ ಪಕ್ಕಾ! ಅಂಗಡಿ ಎದುರೇ ಅಕ್ರಮವಾಗಿ ಮದ್ಯಪಾನಕ್ಕೆ ಅವಕಾಶ ಕಲ್ಪಿಸಿ ಹಣ ಗಳಿಸುತ್ತಿದ್ದ ಆರೋಪದಡಿ ಹೋಟೆಲ್ ವ್ಯಾಪಾರಿಯೊಬ್ಬರ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ಕಾನೂನು ಮತ್ತು ಸುವ್ಯವಸ್ಥೆ) ಗುರುನಾಥ ಹಾದಿಮನಿ ಅವರು ಸರ್ಕಾರದ ಪರವಾಗಿ ನೀಡಿದ ದೂರಿನ ಮೇರೆಗೆ, ಅಂಕೋಲಾ ತಾಲೂಕಿನ ಹಡಿನಮಕ್ಕಿ, ಆಂದ್ಲೆ ನಿವಾಸಿ ನಿತೀಶ ಶಿವಾನಂದ ನಾಯ್ಕ (26) ವಿರುದ್ಧ ಪ್ರಕರಣ ದಾಖಲಾಗಿದೆ.
ಜುಲೈ 18ರಂದು ರಾತ್ರಿ ಸುಮಾರು 8.20ರ ವೇಳೆಗೆ ಆಂದ್ಲೆ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ತನ್ನ ಅಂಗಡಿಯ ಎದುರು ಯಾವುದೇ ಪಾಸ್ ಅಥವಾ ಪರವಾನಗಿ ಪಡೆಯದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಕಲ್ಪಿಸಿ ಅಕ್ರಮವಾಗಿ ಲಾಭ ಗಳಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯ ಸಂದರ್ಭದಲ್ಲಿ 90 ಎಂ.ಎಲ್. ಸಾಮರ್ಥ್ಯದ ಎರಡು ತುಂಬಿದ ಮದ್ಯದ ಟೆಟ್ರಾ ಪ್ಯಾಕ್‌ಗಳು, 180 ಎಂ.ಎಲ್. ಸಾಮರ್ಥ್ಯದ ಒಂದು ತುಂಬಿದ ಟೆಟ್ರಾ ಪ್ಯಾಕ್, ಮೂರು ಖಾಲಿ ಟೆಟ್ರಾ ಪ್ಯಾಕ್‌ಗಳು, ಒಂದು ಖಾಲಿ ಬಿಯರ್ ಟಿನ್, ಒಂದು ಖಾಲಿ ಪ್ಲಾಸ್ಟಿಕ್ ಮದ್ಯದ ಬಾಟಲಿ ಹಾಗೂ ಎರಡು ಪ್ಲಾಸ್ಟಿಕ್ ಗ್ಲಾಸ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ವಸ್ತುಗಳನ್ನು ಜಪ್ತಿ ಮಾಡಿಕೊಂಡಿರುವ ಪೊಲೀಸರು, ಆರೋಪಿಯ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.