ಅಂಕೋಲಾ: ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಸಂಬಂಧಿಸಿದ ತೆರಿಗೆ ಸ್ವೀಕಾರದ ವಿಚಾರವಾಗಿ ಸರ್ಕಾರದ ಸುತ್ತೋಲೆಯನ್ನು ವಿರೋಧಿಸಿ ಬಿಜೆಪಿ ಉತ್ತರ ಕನ್ನಡ ಘಟಕದ ವತಿಯಿಂದ ಆರಂಭಿಸಿರುವ ‘ಜನಾಗ್ರಹ ಆಂದೋಲನ–ನಮ್ಮ ಮನೆ ನಮ್ಮ ಹಕ್ಕು’ ಪ್ರತಿಭಟನೆ ಅಂಕೋಲಾ ಮಂಡಲದ ಅಗಸೂರು ಮಹಾಶಕ್ತಿ ಕೇಂದ್ರದ ಸುಂಕಸಾಳ ಶಕ್ತಿ ಕೇಂದ್ರದ ವ್ಯಾಪ್ತಿಯ ಸುಂಕಸಾಳ ಪಂಚಾಯಿತಿಯಲ್ಲಿ ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಪ್ರಕೋಷ್ಟಗಳ ಸಹ ಸಂಚಾಲಕ ಹಾಗೂ ಹೋರಾಟದ ಮುಂಚೂಣಿ ನಾಯಕ ರಾಘವೇಂದ್ರ ಭಟ್, ರಾಜ್ಯ ಬಿಜೆಪಿ ಘಟಕ ನೀಡಿರುವ ಹೋರಾಟದ ಕರೆಯನ್ನು ಸುಂಕಸಾಳ ಪಂಚಾಯಿತಿಯಿಂದ ಆರಂಭಿಸಲಾಗಿದೆ. ಜನರೊಂದಿಗೆ ಪಕ್ಷ ಇರಲಿದೆ, ಯಾರೂ ಹೆದರುವ ಅಗತ್ಯವಿಲ್ಲ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ರಾಜ್ಯ ಸರ್ಕಾರದ ಸುತ್ತೋಲೆಯ ಪ್ರಕಾರ ಪಂಚಾಯಿತಿಗಳು ಇನ್ನು ಮುಂದೆ ಇಂತಹ ಮನೆಗಳ ತೆರಿಗೆಯನ್ನು ಸ್ವೀಕರಿಸುವುದಿಲ್ಲ ಎಂದು ಆರೋಪಿಸಿದರಲ್ಲದೆ, ಇದರಿಂದ ಮುಂದೆ ಜನರು ತಮ್ಮ ಮನೆಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈ ಹೋರಾಟವು ಸುಂಕಸಾಳಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪಂಚಾಯಿತಿಗಳಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ರಾಜ್ಯ ಮಟ್ಟದಲ್ಲೂ ಹೋರಾಟ ನಡೆಯಲಿದ್ದು, ಸರ್ಕಾರ ಸುತ್ತೋಲೆಯನ್ನು ಹಿಂಪಡೆಯದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎನ್.ಎಸ್. ಹೆಗಡೆ ಹೇಳಿದರು.
ಜಿಲ್ಲಾ ಮಾಧ್ಯಮ ಪ್ರಕೋಷ್ಟದ ಸಹ ಸಂಚಾಲಕ ಜಗದೀಶ್ ನಾಯಕ್ ಮೊಗಟಾ ಮಾತನಾಡಿ, ಆಗಸ್ಟ್ನಲ್ಲಿ ಪಂಚಾಯಿತಿಗಳಿಗೆ ಬಂದಿರುವ ಸುತ್ತೋಲೆಯ ಪ್ರಕಾರ ತೆರಿಗೆ ಸ್ವೀಕರಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕ್ರಮೇಣ ಮನೆ ಕಳೆದುಕೊಳ್ಳುವ ಸಂದರ್ಭವೂ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯದರ್ಶಿ ನಿತ್ಯಾನಂದ ಗಾಂವ್ಕರ, ಜಿಲ್ಲಾ ಒಬಿಸಿ ಅಧ್ಯಕ್ಷ ರಾಜೇಂದ್ರ ನಾಯ್ಕ ಹಾಗೂ ಮಂಡಲ ಪ್ರಭಾರಿ ಅಧ್ಯಕ್ಷ ಸಂಜಯ್ ನಾಯ್ಕ ಮಾತನಾಡಿ, ಸರ್ಕಾರದ ಸುತ್ತೋಲೆಯನ್ನು ವಿರೋಧಿಸಿ ಆರಂಭಿಸಿರುವ ‘ನಮ್ಮ ಮನೆ ನಮ್ಮ ಹಕ್ಕು’ ಆಂದೋಲನವನ್ನು ಜಿಲ್ಲೆಯಾದ್ಯಂತ ಮುಂದುವರಿಸುವುದಾಗಿ ತಿಳಿಸಿದರು. ಮುಂದಿನ ಹೋರಾಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಕರೆ ನೀಡಿದರು.
ಪ್ರತಿಭಟನೆಯ ಬಳಿಕ ರಾಘವೇಂದ್ರ ಭಟ್ ಅವರು ಮನವಿಯನ್ನು ಓದಿದರು. ಬಳಿಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಂಕೋಲಾ ಮಂಡಲಾಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಅಗಸೂರು ಮಹಾಶಕ್ತಿ ಕೇಂದ್ರದ ನಾರಾಯಣ ಹೆಗಡೆ, ಮಂಡಲ ಕಾರ್ಯದರ್ಶಿಗಳಾದ ಶ್ರೀಧರ್ ನಾಯಕ್ ಹಾಗೂ ಚಂದ್ರಕಾಂತ ನಾಯ್ಕ, ಕೇಂದ್ರದ ಅಧ್ಯಕ್ಷ ಸುರೇಶ್ ಗಾಂವ್ಕರ್, ರೈತ ಮೋರ್ಚಾ ಮಂಡಲಾಧ್ಯಕ್ಷ ಎಂ.ಎನ್. ಭಟ್, ಪಂಚಾಯಿತಿಯ ಮಾಜಿ ಸದಸ್ಯರಾದ ಪ್ರಭಾವತಿ ನಾಯ್ಕ ಹಾಗೂ ನಾಗರಾಜ್ ಹೆಗಡೆ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ವಿ.ಎಸ್. ಭಟ್, ಮಂಡಲ ರೈತ ಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ಹೆಗಡೆ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.
ಯುವಮೋರ್ಚಾದ ಶಶಾಂಕ ಹೆಗಡೆ ಸ್ವಾಗತಿಸಿ ನಿರೂಪಿಸಿದರು. ಉದಯ್ ನಾಯ್ಕ ವಜ್ರಳ್ಳಿ ವಂದಿಸಿದರು.


