ಸಾರ್, ಲೋನ್ ಬೇಕಾ?, ನಿಮಗೆ ಲಾಟರಿ ಬಂದಿದೆ!, ನಿಮ್ಮ ಕ್ರೆಡಿಟ್ ಕಾರ್ಡ್‌ಗೆ ಹೊಸ ಆಫರ್ ಇದೆ… ಇಂಥ ಕರೆಗಳು ಈಗ ನಮ್ಮ ಮೊಬೈಲ್ ಬದುಕಿನ ಭಾಗವೇ ಆಗಿಬಿಟ್ಟಿವೆ. ಅಪರಿಚಿತ ನಂಬರ್ ಕಂಡರೆ ಕರೆ ಸ್ವೀಕರಿಸಬೇಕೋ, ಬೇಡವೋ ಎಂಬ ಗೊಂದಲ. ಒಂದು ನಂಬರ್‌ನ್ನು ಬ್ಲಾಕ್ ಮಾಡಿದರೆ ಮತ್ತೊಂದು ನಂಬರ್‌ನಿಂದ ಕರೆ. ಅದನ್ನೂ ಬ್ಲಾಕ್ ಮಾಡಿದರೆ ಇನ್ನೊಂದು! ಆಗ ಸಹಜವಾಗಿಯೇ ಒಂದು ಪ್ರಶ್ನೆ ಬರುತ್ತದೆ, ನಮ್ಮ ಮೊಬೈಲ್ ನಂಬರ್ ಇವರಿಗೆ ಸಿಗುವುದಾದರೂ ಹೇಗೆ?
ನಿಜ ಹೇಳಬೇಕೆಂದರೆ, ಇದಕ್ಕೆ ಒಂದೇ ದಾರಿ ಇಲ್ಲ. ನಾವು ಎಲ್ಲೆಲ್ಲಿ ನಮ್ಮ ಮೊಬೈಲ್ ನಂಬರ್ ಕೊಡುತ್ತೇವೋ, ಅಲ್ಲಿಂದಲೇ ಅದರ ಪಯಣ ಶುರುವಾಗಬಹುದು. ಅಂಗಡಿಯಲ್ಲಿ ಬಿಲ್ ಮಾಡುವಾಗ ನಂಬರ್ ಕೊಟ್ಟಿರಬಹುದು. ಯಾವುದಾದರೂ ಆ್ಯಪ್ ಡೌನ್‌ಲೋಡ್ ಮಾಡುವಾಗ ನಂಬರ್ ಹಾಕಿರಬಹುದು. ಆನ್‌ಲೈನ್‌ನಲ್ಲಿ ಯಾವುದೋ ಫಾರ್ಮ್ ತುಂಬಿರಬಹುದು. ಉದ್ಯೋಗಕ್ಕಾಗಿ ಹಾಕಿದ ಅರ್ಜಿಯಲ್ಲಿರಬಹುದು. ಹೀಗೆ ಬೇರೆ ಬೇರೆ ಕಡೆ ನಾವು ಕೊಟ್ಟ ನಂಬರ್‌ಗಳು ವಿವಿಧ ಡೇಟಾಬೇಸ್‌ಗಳಲ್ಲಿ ಸೇರುವ ಸಾಧ್ಯತೆ ಇರುತ್ತದೆ.
ಇನ್ನೊಂದು ವಿಚಿತ್ರ ದಾರಿ ಇದೆ. ಸ್ಪ್ಯಾಮ್ ಮಾಡುವವರಿಗೆ ನಿಮ್ಮ ನಂಬರ್ ಮೊದಲೇ ಗೊತ್ತಿರಬೇಕೆಂದೇನಿಲ್ಲ! ಕಂಪ್ಯೂಟರ್ ಮೂಲಕ ಸಾವಿರಾರು ನಂಬರ್‌ಗಳಿಗೆ ಒಂದಾದ ಮೇಲೆ ಒಂದರಂತೆ ಸ್ವಯಂಚಾಲಿತವಾಗಿ ಕರೆ ಮಾಡುವ ವ್ಯವಸ್ಥೆಗಳಿವೆ. ಯಾರಾದರೂ ಕರೆ ಸ್ವೀಕರಿಸಿದರೆ, ಆ ನಂಬರ್ ಬಳಕೆಯಲ್ಲಿದೆ ಎಂಬುದು ಅವರಿಗೆ ಗೊತ್ತಾಗುತ್ತದೆ. ಮುಂದೆ ಅದೇ ನಂಬರ್‌ಗೆ ಜಾಹೀರಾತು ಅಥವಾ ಬೇರೆ ರೀತಿಯ ಕರೆಗಳು ಬರಲು ಶುರುವಾಗಬಹುದು.
ನಾವು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ವೆಬ್‌ಸೈಟ್‌ಗಳಲ್ಲಿ ಮೊಬೈಲ್ ನಂಬರ್‌ನ್ನು ಬಹಿರಂಗವಾಗಿ ಹಾಕಿದ್ದರೆ ಅಲ್ಲಿಂದಲೂ ನಂಬರ್‌ಗಳು ಇತರರ ಕೈ ಸೇರುವ ಸಾಧ್ಯತೆಯಿದೆ. ಕೆಲವೊಂದು ಸಾಫ್ಟ್‌ವೇರ್‌ಗಳು ಇಂಟರ್‌ನೆಟ್‌ನಲ್ಲಿ ಬಹಿರಂಗವಾಗಿರುವ ಮಾಹಿತಿಯನ್ನು ಸ್ವಯಂಚಾಲಿತವಾಗಿ ಹುಡುಕಿ ಸಂಗ್ರಹಿಸುತ್ತವೆ.
ಹಾಗಾದರೆ ಏನು ಮಾಡಬೇಕು? ಮೊದಲನೆಯದಾಗಿ, ಅಗತ್ಯವಿಲ್ಲದ ಜಾಗದಲ್ಲಿ ಮೊಬೈಲ್ ನಂಬರ್ ಕೊಡುವುದನ್ನು ಕಡಿಮೆ ಮಾಡುವುದು ಒಳ್ಳೆಯದು. ಅಪರಿಚಿತ ಕರೆ ಬಂದಾಗ OTP, ಬ್ಯಾಂಕ್ ವಿವರ, UPI PIN, ಪಾಸ್‌ವರ್ಡ್‌ಗಳಂತಹ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಹೇಳಬಾರದು. “ಲಾಟರಿ ಬಂದಿದೆ”, “ಕೆವೈಸಿ ಮುಗಿದಿಲ್ಲ”, “ನಿಮ್ಮ ಖಾತೆ ಬಂದ್ ಆಗಲಿದೆ” ಎಂಬ ಮಾತು ಕೇಳಿದ ತಕ್ಷಣ ಗಾಬರಿಯಾಗುವುದಕ್ಕಿಂತ ಮೊದಲು ಕರೆ ನಿಜವೇ ಎಂದು ಪರಿಶೀಲಿಸಬೇಕು.
ಸ್ಪ್ಯಾಮ್ ಅಥವಾ ವಂಚನೆಯ ಅನುಮಾನ ಇರುವ ಕರೆ, SMS ಅಥವಾ WhatsApp ಸಂದೇಶಗಳನ್ನು ಕೇಂದ್ರ ಸರ್ಕಾರದ Sanchar Saathi ಸೇವೆಯಲ್ಲಿರುವ Chakshu ಮೂಲಕ ವರದಿ ಮಾಡಬಹುದು. ಸಾಮಾನ್ಯ ವಾಣಿಜ್ಯ ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಳ ಬಗ್ಗೆ 1909 ಮೂಲಕ ದೂರು ನೀಡಬಹುದು ಅಥವಾ DND ಸೇವೆಯನ್ನು ಬಳಸಬಹುದು.
ಮುಖ್ಯವಾಗಿ, ಸ್ಪ್ಯಾಮ್ ಕಾಲ್ ಬಂದಾಗ ಕರೆ ಕಟ್ ಮಾಡುವುದು ಮಾತ್ರ ಸಾಕಾಗುವುದಿಲ್ಲ. ನಮ್ಮ ವೈಯಕ್ತಿಕ ಮಾಹಿತಿಯನ್ನು ಎಲ್ಲೆಲ್ಲಿ ಹಂಚಿಕೊಳ್ಳುತ್ತಿದ್ದೇವೆ ಎಂಬುದನ್ನೂ ಗಮನಿಸಬೇಕು. ಏಕೆಂದರೆ ನಮ್ಮ ಮೊಬೈಲ್ ನಂಬರ್ ಕೇವಲ ಹತ್ತು ಅಂಕಿಗಳ ಸಂಖ್ಯೆ ಅಲ್ಲ… ಅದು ನಮ್ಮ ಗುರುತು, ಬ್ಯಾಂಕ್ ಖಾತೆ, UPI ಮತ್ತು ಹಲವು ವೈಯಕ್ತಿಕ ಸೇವೆಗಳ ಬಾಗಿಲಿಗೂ ಕೊಂಡಿಯೂ ಹೌದು!


