Friday, October 23, 2026
HomeLocal Newsಜನತೆಗೆ ಉತ್ತರಿಸಲಾಗದೆ ಶಾಸಕ ಭೀಮಣ್ಣರಿಂದ ಹತಾಶೆಯ ಪ್ರಲಾಪ: ಸದಾನಂದ ಭಟ್

ಜನತೆಗೆ ಉತ್ತರಿಸಲಾಗದೆ ಶಾಸಕ ಭೀಮಣ್ಣರಿಂದ ಹತಾಶೆಯ ಪ್ರಲಾಪ: ಸದಾನಂದ ಭಟ್

ಶಿರಸಿ: ಅತಿಕ್ರಮಣದಲ್ಲಿರುವ ಆಸ್ತಿಗಳಿಗೆ ತೆರಿಗೆ ಸ್ವೀಕರಿಸುವುದನ್ನು ನಿರ್ಬಂಧಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ವಿರೋಧಿಸಿ ಬಿಜೆಪಿ ಉತ್ತರ ಕನ್ನಡ ಜಿಲ್ಲೆಯಲ್ಲಿ ‘ನಮ್ಮ ಮನೆ ನಮ್ಮ ಹಕ್ಕು’ ಜನಾಂದೋಲನ ನಡೆಸುತ್ತಿದ್ದು, ಇದಕ್ಕೆ ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವುದನ್ನು ಸಹಿಸಲಾಗದೆ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಬಿಜೆಪಿಯ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ನಿಡುಗೋಡ್ ಆರೋಪಿಸಿದ್ದಾರೆ.

ಮಾಧ್ಯಮ ಪ್ರಕಟಣೆ ನೀಡಿರುವ ಅವರು, 1993ರ ಪಂಚಾಯತ್ ರಾಜ್ ಅಧಿನಿಯಮಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ತಿದ್ದುಪಡಿ ತಂದು, ಅತಿಕ್ರಮಣದಲ್ಲಿರುವ ಆಸ್ತಿಗಳಿಗೆ ಗ್ರಾಮ ಪಂಚಾಯತಿಗಳು ತೆರಿಗೆ ಸ್ವೀಕರಿಸುವುದನ್ನು ನಿರ್ಬಂಧಿಸಿದೆ.ಈ ಕುರಿತು ಆಗಸ್ಟ್ 13, 2026ರಂದು ಇಲಾಖೆಯ ಸುತ್ತೋಲೆಯನ್ನೂ ಹೊರಡಿಸಲಾಗಿದೆ. ಇದನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತಿಗಳ ಎದುರು ಜನಪರ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಈ ಹೋರಾಟಕ್ಕೆ ಜನರು ಬೆಂಬಲಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಬಿಜೆಪಿಯ ವಿರುದ್ಧ ಆರೋಪ ಮಾಡುತ್ತಿರುವುದು ಅವರ ಹತಾಶೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.ಅತಿಕ್ರಮಣ ಮಂಜೂರಿ ಕುರಿತು ಸಂಸದರು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದರೆ ಮಂಜೂರಾಗುತ್ತಿತ್ತು ಎಂಬ ರೀತಿಯಲ್ಲಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿದ್ದಾರೆ.

ಅರಣ್ಯ ವಿಚಾರವು ಸಂವಿಧಾನದ ಕನ್ಕರೆಂಟ್ ಲಿಸ್ಟ್‌ನಲ್ಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿಗಳ ಬಗ್ಗೆ ಶಾಸಕರು ಮೊದಲು ತಿಳಿದುಕೊಳ್ಳಬೇಕು.ನೀತಿ ಮತ್ತು ನಿಯಮ ರೂಪಿಸುವುದು ಕೇಂದ್ರದ ಜವಾಬ್ದಾರಿಯಾದರೆ, ಅವುಗಳನ್ನು ಜಾರಿಗೊಳಿಸುವ ಹಾಗೂ ದೈನಂದಿನ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ ಎಂದು ಸದಾನಂದ ಭಟ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ 2005ರ ಕಾಯ್ದೆಯಂತೆ ಅತಿಕ್ರಮಣದಾರರಿಗೆ ಜಿಪಿಎಸ್ ನಡೆಸಿ ಹಕ್ಕುಪತ್ರ ನೀಡುವ ಜವಾಬ್ದಾರಿ ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ. ಈ ಪ್ರಕ್ರಿಯೆ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿದೆ. ಗ್ರಾಮಸಭೆ ಮಾನ್ಯ ಮಾಡಿರುವ ಅತಿಕ್ರಮಣ ಹಕ್ಕುಗಳಿಗೆ ರಾಜ್ಯ ಸರ್ಕಾರದ ಮೂಲಕ ಹಕ್ಕುಪತ್ರ ಕೊಡಿಸಲು ಶಾಸಕ ಭೀಮಣ್ಣ ನಾಯ್ಕ ಅವರು ತಮ್ಮ ಇಚ್ಛಾಶಕ್ತಿ ತೋರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅತಿಕ್ರಮಣದಾರರ ಮನೆಗಳಿಗೆ ತೊಂದರೆಯಾದರೆ ಯಾವ ತ್ಯಾಗಕ್ಕೂ ಸಿದ್ಧ ಎಂದು ಹೇಳಿರುವ ಶಾಸಕ ಭೀಮಣ್ಣ ನಾಯ್ಕ ಅವರು, ಅತಿಕ್ರಮಣದಲ್ಲಿರುವ ಆಸ್ತಿಗಳಿಗೆ ಗ್ರಾಮ ಪಂಚಾಯತಿಗಳು ತೆರಿಗೆ ಸ್ವೀಕರಿಸದಂತೆ ರಾಜ್ಯ ಸರ್ಕಾರ ಏಕೆ ಆದೇಶ ಹೊರಡಿಸಿದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ್ದಾರೆ.

ಈ ವಿಷಯವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸದೆ, ‘ಜನರಿಗೆ ಯಾವುದೇ ತೊಂದರೆಯಾಗಲು ಬಿಡುವುದಿಲ್ಲ’ ಎಂದು ಹೇಳಿರುವ ಶಾಸಕರ ಮಾತುಗಳನ್ನು ಜನರು ಹೇಗೆ ನಂಬಬೇಕು ಎಂದು ಪ್ರಶ್ನಿಸಿರುವ ಅವರು, ಬಿಜೆಪಿಯ ‘ನಮ್ಮ ಮನೆ ನಮ್ಮ ಹಕ್ಕು’ ಜನಾಂದೋಲನಕ್ಕೆ ಜಿಲ್ಲಾದ್ಯಂತ ವ್ಯಕ್ತವಾಗುತ್ತಿರುವ ಬೆಂಬಲವನ್ನು ಕಂಡು ವಿಚಲಿತರಾಗುವ ಬದಲು, ಕಾಂಗ್ರೆಸ್ ಸಭೆಗಳಲ್ಲಿ ಬಿಜೆಪಿ ಹಾಗೂ ಸಂಸದರ ವಿರುದ್ಧ ಆರೋಪ ಮಾಡುವುದಕ್ಕಿಂತ ಸರ್ಕಾರದ ಆದೇಶವನ್ನು ಹಿಂಪಡೆಯಲು ಅಗತ್ಯ ಕ್ರಮ ಕೈಗೊಂಡು ಅದನ್ನು ಜನರ ಮುಂದೆ ತೋರಿಸಲಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದ ಆಡಳಿತ ಮತ್ತು ಜನವಿರೋಧಿ ನೀತಿಗಳಿಂದ ಆಕ್ರೋಶಗೊಂಡಿರುವ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಆಧಾರರಹಿತ ರಾಜಕೀಯ ಆರೋಪಗಳನ್ನು ಮಾಡುವ ಬದಲು, ಸರ್ಕಾರ ಈ ಆದೇಶವನ್ನು ತಕ್ಷಣ ಹಿಂಪಡೆದು ಜನರಿಗೆ ಉತ್ತರ ನೀಡಬೇಕು ಎಂದು ಸದಾನಂದ ಭಟ್ ಒತ್ತಾಯಿಸಿದ್ದಾರೆ.ಜಿಲ್ಲೆಯ ಅರಣ್ಯ, ಬೆಟ್ಟ ಹಾಗೂ ಕಂದಾಯ ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಅತಿಕ್ರಮಣದಾರರ ಹಿತಾಸಕ್ತಿ ರಕ್ಷಣೆಗೆ ಬಿಜೆಪಿ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಅವರು ತಿಳಿಸಿದ್ದಾರೆ.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಅತಿಕ್ರಮಣದಲ್ಲಿದ್ದ ನಿವಾಸಿಗಳಿಗೆ ದೊಡ್ಡ ಸಂಖ್ಯೆಯಲ್ಲಿ ಮನೆಗಳನ್ನು ಕೊಡಿಸಿದ್ದು, ಅವರ ಹಿತ ರಕ್ಷಣೆಗೆ ಪ್ರಯತ್ನಿಸಿರುವುದು ಜನತೆಗೆ ತಿಳಿದಿದೆ. ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಶಾಸಕರು ಅತಿಕ್ರಮಣದಾರರ ಹಿತ ರಕ್ಷಣೆಗೆ ಏನು ಮಾಡಿದ್ದಾರೆ ಎಂಬುದನ್ನು ಜನರ ಮುಂದೆ ತಿಳಿಸಲಿ. ಕೇವಲ ಪ್ರಚಾರಕ್ಕಾಗಿ ಆರೋಪ-ಪ್ರತ್ಯಾರೋಪ ಮಾಡುವ ಬದಲು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಲಿ ಎಂದು ಸದಾನಂದ ಭಟ್ ನಿಡುಗೋಡ್ ಹೇಳಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share