ಬನವಾಸಿ: ಭಾರತೀಯ ಸಂಸ್ಕೃತಿ ಹಾಗೂ ಸನಾತನ ಪರಂಪರೆಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ ಧರ್ಮ ಮತ್ತು ಹಿಂದೂ ಸಮಾಜದ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.
ಇಲ್ಲಿನ ಜನತಾ ಕಾಲೋನಿಯ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಟ್ರಸ್ಟ್ ವತಿಯಿಂದ ಹಿಂದೂ ಮಹಾಗಣಪತಿಯ 20ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ಕೇವಲ ಆಚರಣೆಗಳಿಗೆ ಸೀಮಿತವಾಗಿಲ್ಲ. ಜೀವನ ಮೌಲ್ಯಗಳು, ಕುಟುಂಬ ವ್ಯವಸ್ಥೆ, ಸಂಸ್ಕಾರ ಹಾಗೂ ಸಮಾಜದ ಒಗ್ಗಟ್ಟನ್ನೂ ಒಳಗೊಂಡಿದೆ ಎಂದರು.
ದೇವಾಲಯಗಳು ಮತ್ತು ಧಾರ್ಮಿಕ ಆಚರಣೆಗಳು ನಮ್ಮ ಪರಂಪರೆಯನ್ನು ಉಳಿಸುವ ಪ್ರಮುಖ ಕೇಂದ್ರಗಳಾಗಿದ್ದು, ಮಕ್ಕಳಿಗೆ ಬಾಲ್ಯದಿಂದಲೇ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಸನಾತನ ಧರ್ಮದ ವಿಚಾರಗಳನ್ನು ಪರಿಚಯಿಸಬೇಕು ಎಂದರು.
ಹಿಂದೂ ಸಮಾಜದೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪರಸ್ಪರ ಗೌರವ ಹಾಗೂ ಸಹಕಾರದೊಂದಿಗೆ ಸಂಘಟಿತರಾಗಬೇಕು. ಸಂಘಟನೆ ಎಂದರೆ ಕೇವಲ ಸಂಖ್ಯಾಬಲವಲ್ಲ. ಸಮಾಜದ ಒಳಿತಿಗಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.
ಹಿಂದೂ ಧರ್ಮದ ಮೂಲ ಆಶಯಗಳಲ್ಲಿ ವಿವಿಧ ಆಚರಣೆಗಳು, ವಿಚಾರಧಾರೆಗಳು ಹಾಗೂ ಜೀವನ ಪದ್ಧತಿಗಳಿಗೆ ಸ್ಥಾನವಿದೆ. ಈ ವೈವಿಧ್ಯತೆಯ ನಡುವೆಯೂ ತಮ್ಮ ಸಾಂಸ್ಕೃತಿಕ ಬೇರುಗಳನ್ನು ಅರ್ಥಮಾಡಿಕೊಂಡು ಯುವಜನತೆ ತಮ್ಮ ಪರಂಪರೆಯ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗಜಾನನ ಗೌಡ, ಶ್ರೀ ಜಯಂತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ, ಶ್ರೀ ಸಿದ್ದಿವಿನಾಯಕ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸಿದ್ದವೀರೇಶ ನರೇಗಲ್ ಹಾಗೂ ವೈದ್ಯಾಧಿಕಾರಿ ಡಾ. ಜಯಶ್ರೀ ಹೆಗಡೆ ಮಾತನಾಡಿದರು. ಗಣೇಶೋತ್ಸವಕ್ಕೆ ಸಹಾಯಹಸ್ತ ನೀಡಿದ ದಾನಿಗಳನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.
ಹಿಂದೂ ಮಹಾಗಣಪತಿ ಸೇವಾ ಸಮಿತಿಯ ಸದಸ್ಯರು ಹಾಗೂ ಸಾವಿರಾರು ಹಿಂದೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಶಿಕ್ಷಕ ಗೌರೀಶ ಕಾರ್ಯಕ್ರಮ ನಿರ್ವಹಿಸಿದರು.
ವರದಿ: ಸುಧೀರ ನಾಯರ್ ಬನವಾಸಿ
