ಬನವಾಸಿ: ಇಲ್ಲಿನ ಶ್ರೀ ವೀರಾಂಜನೆಯ ದೇವಸ್ಥಾನದಲ್ಲಿ ಕಳೆದ 53 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ‘ಬನವಾಸಿ ಕಾ ರಾಜಾ’ ಎಂದೇ ಪ್ರಸಿದ್ಧಿ ಪಡೆದ ಗಣೇಶ ಮೂರ್ತಿಯನ್ನು ಸೋಮವಾರ ರಾತ್ರಿ ಅದ್ದೂರಿಯಾಗಿ ಬೀಳ್ಕೊಡಲಾಯಿತು.
ಸಂಜೆ 5 ಗಂಟೆಗೆ ಅಲಂಕೃತ ವಾಹನದಲ್ಲಿ ಪುಷ್ಪಾಲಂಕಾರಗಳಿಂದ ನಿರ್ಮಿಸಿದ್ದ ಮಂಟಪದಲ್ಲಿ ಗಜಮುಖನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಶ್ರೀ ವೀರಾಂಜನೆಯ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಜೈನಬಸದಿ ರಸ್ತೆ, ರಥ ಬೀದಿ, ಮಾರ್ಕೆಟ್ ರಸ್ತೆ, ಸಂತೆಪೇಟೆ ರಸ್ತೆ, ಆಲದ ಮರ ವೃತ್ತ, ಸೊರಬ ರಸ್ತೆ, ಕದಂಬ ವೃತ್ತ ಹಾಗೂ ಶಿವಾಜಿ ವೃತ್ತದ ಮೂಲಕ ಸಾಗಿ, ಶಿರಸಿ ರಸ್ತೆಯಲ್ಲಿರುವ ರಾಮತೀರ್ಥ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ವಿಸರ್ಜನಾ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಧ್ವನಿವರ್ಧಕದಲ್ಲಿ ಮೊಳಗುತ್ತಿದ್ದ ವಿವಿಧ ಗೀತೆಗಳಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸಿದ ಯುವಕರು, ಕೇಸರಿ ಬಾವುಟಗಳನ್ನು ರಾರಾಜಿಸುತ್ತಾ ಗಣೇಶ ನಾಮಸ್ಮರಣೆ ಹಾಗೂ ಜಯಘೋಷಗಳನ್ನು ಮೊಳಗಿಸಿದರು.
ಗಣೇಶನಿಗೆ ವೈಭವದ ವಿದಾಯ ಹೇಳಲು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಸಾವಿರಾರು ಜನ ಒಂದೆಡೆಯಾದರೆ, ಈ ಅವಿಸ್ಮರಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬನವಾಸಿಯ ಬೀದಿಗಳಲ್ಲಿ ನೆರೆದಿದ್ದರು.
ಬೇರೆ ಬೇರೆ ಊರುಗಳಿಂದ ಆಗಮಿಸಿದ್ದ ಜನರು ರಸ್ತೆಯ ಇಕ್ಕೆಲಗಳಲ್ಲಿ, ಮನೆ-ಅಂಗಡಿಗಳ ಮುಂದೆ ಹಾಗೂ ಕಟ್ಟಡಗಳ ಮೇಲ್ಭಾಗದಲ್ಲಿ ನಿಂತು ಗಣೇಶ ವಿಸರ್ಜನಾ ಮೆರವಣಿಗೆಯ ವೈಭವವನ್ನು ವೀಕ್ಷಿಸಿದರು. ರಾತ್ರಿ ವೇಳೆಯಲ್ಲೂ ಪ್ರಮುಖ ರಸ್ತೆಗಳು ಜನರಿಂದ ತುಂಬಿ ತುಳುಕುತ್ತಿದ್ದವು.
‘ಬನವಾಸಿ ಕಾ ಮಹಾ ರಾಜಾ’ನ ವಿಸರ್ಜನಾ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಸಿಪಿಐ ಸಂಪತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಬನವಾಸಿ ಪಿಎಸ್ಐಗಳಾದ ಮಾಂತೇಶ ಕುಂಬಾರ ಹಾಗೂ ರವೀಂದ್ರ ಬಿರಾದಾರ ಅವರ ನೇತೃತ್ವದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭದ್ರತಾ ವ್ಯವಸ್ಥೆ ನಿರ್ವಹಿಸಿದರು.
– ವರದಿ; ಸುಧೀರ್ ನಾಯರ್, ಬನವಾಸಿ.


