ಹೊನ್ನಾವರ: ಬಾಡಿಗೆ ಹಣ ಕೇಳಲು ತೆರಳಿದ್ದ 72 ವರ್ಷದ ವೃದ್ಧರೊಬ್ಬರಿಗೆ ಅವಾಚ್ಯವಾಗಿ ಬೈದು, ಕಾಲಿನಿಂದ ಒದ್ದು ಹಲ್ಲೆ ಮಾಡಿದ ಆರೋಪದಡಿ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದಾವರ ಕೋಲ್ಕಂಡಕೇರಿ ನಿವಾಸಿ ಫಾರೂಕ್ ಇಸ್ಮಾಯಿಲ್ ಸಿಕಂದರ್ (72) ಅವರು ನೀಡಿದ ದೂರಿನ ಆಧಾರದ ಮೇಲೆ ಹಾಲಿಗದ್ದೆ ಚಂದಾವರ ನಿವಾಸಿ ಜಮಾಲ್ ಸಾಬ್ ಇಬ್ರಾಹಿಂ ಶೇಖ್ (48) ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಚಂದಾವರ ನಾಕಾ ಸಮೀಪ ರಸ್ತೆ ಬದಿಯಲ್ಲಿದ್ದ ಜಾಗದಲ್ಲಿ ಸುಮಾರು 20 ವರ್ಷಗಳ ಹಿಂದೆ ಅತಿಕ್ರಮಣ ಮಾಡಿ, ಕಳೆದ ಆರು ವರ್ಷಗಳಿಂದ ಫಾರೂಕ್ ಗುಜರಿ ಅಂಗಡಿ ನಡೆಸುತ್ತಿದ್ದರು. ವಯಸ್ಸಾದ ಹಿನ್ನೆಲೆಯಲ್ಲಿ ಅಂಗಡಿಯನ್ನು ತಮ್ಮ ಮಗ ಇಸ್ಮಾಯಿಲ್ ಹಾಗೂ ಅಳಿಯ ಜಮಾಲ್ ಸಾಬ್ ಅವರಿಗೆ ನಡೆಸಲು ನೀಡಿದ್ದರು ಎನ್ನಲಾಗಿದೆ.
ಫಾರೂಕ್ ಅವರ ಮಗ ಕಳೆದ ಒಂದು ವರ್ಷದ ಹಿಂದೆ ಅಡಿಕೆ ವ್ಯಾಪಾರ ಆರಂಭಿಸಿದ ಹಿನ್ನೆಲೆಯಲ್ಲಿ, ಜಮಾಲ್ ಸಾಬ್ ಅವರೇ ಗುಜರಿ ಅಂಗಡಿ ನಡೆಸಿಕೊಂಡು ತಿಂಗಳಿಗೆ ರೂ.16 ಸಾವಿರ ಬಾಡಿಗೆ ನೀಡುವುದಾಗಿ ಮಾತುಕತೆ ಮಾಡಿಕೊಂಡಿದ್ದರು. ಮೊದಲ ಮೂರು ತಿಂಗಳ ಬಾಡಿಗೆ ನೀಡಿದ ಬಳಿಕ ಏಳು ತಿಂಗಳ ಬಾಡಿಗೆ ನೀಡಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜುಲೈ 7ರಂದು ಬೆಳಗ್ಗೆ ಸುಮಾರು 10.30ರ ವೇಳೆಗೆ ಫಾರೂಕ್ ಅವರು ಬಾಡಿಗೆ ಹಣದ ಕುರಿತು ವಿಚಾರಿಸಲು ಅಂಗಡಿ ಬಳಿ ತೆರಳಿದ್ದರು. ಈ ವೇಳೆ ಜಮಾಲ್ ಸಾಬ್ ಬಾಡಿಗೆ ಹಣ ನೀಡದೆ ಅವಾಚ್ಯ ಶಬ್ದಗಳಿಂದ ಬೈದು, ಕಾಲಿನಿಂದ ಎಡ ಕಿಬ್ಬೊಟ್ಟೆಗೆ ಒದ್ದು ಹಲ್ಲೆ ಮಾಡಿ ತೆರಳಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ನ್ಯಾಯಾಲಯದ ಅನುಮತಿ ದೊರೆತ ಬಳಿಕ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


