ಬನವಾಸಿ: ಬನವಾಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆರೋಗ್ಯ ಸೇವೆಯ ಪ್ರಮುಖ ಆಧಾರವಾಗಿರುವ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಬೇಡಿಕೆ ಸಾರ್ವಜನಿಕ ವಲಯದಲ್ಲಿ ಬಲಗೊಳ್ಳುತ್ತಿದೆ.
ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳು, ಹಳ್ಳಿಗಳು ಹಾಗೂ ಜನವಸತಿ ಪ್ರದೇಶಗಳಿದ್ದು, ರಾಜ್ಯ ಹೆದ್ದಾರಿಯೂ ಹಾದುಹೋಗುತ್ತದೆ. ಈ ಭಾಗದ ಜನರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಆದರೆ ಗಂಭೀರ ಕಾಯಿಲೆ, ಅಪಘಾತ, ತುರ್ತು ಚಿಕಿತ್ಸೆ, ಹೆರಿಗೆ ಸೇರಿದಂತೆ ಹೆಚ್ಚಿನ ವೈದ್ಯಕೀಯ ಸೇವೆಯ ಅಗತ್ಯವಿದ್ದಾಗ ರೋಗಿಗಳನ್ನು ದೂರದ ಆಸ್ಪತ್ರೆಗಳಿಗೆ ಕರೆದೊಯ್ಯಬೇಕಾದ ಪರಿಸ್ಥಿತಿ ಇದೆ.
ವಿಶೇಷವಾಗಿ ರಾತ್ರಿ ವೇಳೆಯಲ್ಲಿ ತುರ್ತು ಆರೋಗ್ಯ ಸಮಸ್ಯೆಗಳು ಎದುರಾದಾಗ ಅಗತ್ಯ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ರೋಗಿಗಳು ಹಾಗೂ ಅವರ ಕುಟುಂಬಸ್ಥರು ಪರದಾಡುವಂತಾಗಿದೆ. ಗ್ರಾಮೀಣ ಭಾಗದ ಜನರು ಸಮಯ, ಹಣ ಹಾಗೂ ಸಾರಿಗೆ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬನವಾಸಿಯಲ್ಲಿಯೇ ಹೆಚ್ಚಿನ ಮಟ್ಟದ ಆರೋಗ್ಯ ಸೇವೆ ದೊರೆಯುವಂತೆ ಮಾಡಬೇಕಿದೆ.
ಬನವಾಸಿ ಪಿಎಚ್ಸಿಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿದರೆ ತಜ್ಞ ವೈದ್ಯರು, ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ, ಅಗತ್ಯ ಪರೀಕ್ಷಾ ಸೌಲಭ್ಯಗಳು ಹಾಗೂ ತುರ್ತು ಚಿಕಿತ್ಸೆಯಂತಹ ಸೇವೆಗಳನ್ನು ವಿಸ್ತರಿಸಲು ಅವಕಾಶ ಸಿಗಲಿದೆ. ಇದರಿಂದ ಬನವಾಸಿ ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ಗ್ರಾಮಗಳ ಜನರಿಗೂ ಅನುಕೂಲವಾಗಲಿದೆ.
ಪ್ರಸ್ತುತ ಇರುವ ಕಟ್ಟಡ ಹಾಗೂ ಮೂಲಸೌಕರ್ಯವನ್ನು ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಿ, ಹೆಚ್ಚುವರಿ ಸಿಬ್ಬಂದಿ ಮತ್ತು ವೈದ್ಯಕೀಯ ಉಪಕರಣಗಳನ್ನು ಒದಗಿಸುವ ಮೂಲಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಬನವಾಸಿ ಭಾಗದ ಜನರ ಬಹುದಿನಗಳ ಆರೋಗ್ಯ ಸೇವೆಯ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಪ್ರಸ್ತಾವನೆ ಸಲ್ಲಿಸಬೇಕು. ಜನಪ್ರತಿನಿಧಿಗಳು ಕೂಡ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಶೀಘ್ರ ಅನುಮೋದನೆ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಬನವಾಸಿ ನೂತನ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ್ ಕಾನಳ್ಳಿ ಆಗ್ರಹಿಸಿದ್ದಾರೆ.
ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವಂತಾಗಲು ಬನವಾಸಿ ಪಿಎಚ್ಸಿಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವುದು ಅತ್ಯಗತ್ಯವಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಬನವಾಸಿ ಮಂಡಲ ಅಧ್ಯಕ್ಷೆ ಶಾಂತಾ ಎಂ. ಸಣ್ಣಲಿಂಗಣ್ಣನ್ನವರ ಹೇಳಿದ್ದಾರೆ.
ವರದಿ; ಸುಧೀರ್ ನಾಯರ್, ಬನವಾಸಿ.


