5.05 ಲಕ್ಷ ಹಣ ಕೊಟ್ಟ ಮೇಲೂ ಕಾರು ಅವರದಾಗಲಿಲ್ಲ!
ದಾಂಡೇಲಿ: ಕಡಿಮೆ ಬೆಲೆಗೆ ಉತ್ತಮ ಕಾರು ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ರೂ.5.05 ಲಕ್ಷ ಪಡೆದು, ಬೇರೆ ವ್ಯಕ್ತಿಯ ಹೆಸರಿನ ಕಾರೊಂದನ್ನು ನೀಡಿ ಬಳಿಕ ಆ ಕಾರಿನ ಮಾಲೀಕರು ಬಂದು ವಾಹನವನ್ನು ತೆಗೆದುಕೊಂಡು ಹೋದ ಘಟನೆಗೆ ಸಂಬಂಧಿಸಿದಂತೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಹಳೇ ದಾಂಡೇಲಿಯ ಲಕ್ಷ್ಮೀ ಚಾಳ ನಿವಾಸಿ, ಕಾಂಟ್ರಾಕ್ಟರ್ ಗೋಪಾಲಸಿಂಗ್ ಸುಧೀರಸಿಂಗ್ ರಜಪೂತ ಅವರು ನೀಡಿದ ದೂರಿನ ಆಧಾರದಲ್ಲಿ ಯಲ್ಲಾಪುರ ತಾಲೂಕಿನ ಗುಳ್ಳಾಪುರ ನಿವಾಸಿ ಶಿವಕುಮಾರ ಮುರಗೇಶ ಗೌಂಡರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಕುಮಾರ ಗೌಂಡರ ಕಡಿಮೆ ದರದಲ್ಲಿ ಉತ್ತಮ ಕಾರು ಕೊಡಿಸುವುದಾಗಿ ನಂಬಿಸಿ, ಗೋಪಾಲಸಿಂಗ್ ಅವರಿಂದ 2025ರ ಜುಲೈ 16ರಂದು ದಾಂಡೇಲಿಯ ಕುಳಗಿ ಬ್ರಿಡ್ಜ್ ಸಮೀಪ ಹಾಗೂ ದಾಂಡೇಲಿಯ ವಿವಿಧ ಸ್ಥಳಗಳಲ್ಲಿ ಫೋನ್ಪೇ ಮತ್ತು ಬ್ಯಾಂಕ್ ಖಾತೆಗಳ ಮೂಲಕ ಒಟ್ಟು ರೂ.5,05,000 ಹಣ ಪಡೆದಿದ್ದರು ಎಂದು ಆರೋಪಿಸಲಾಗಿದೆ.
ಹಣ ಪಡೆದ ಬಳಿಕ ಆರೋಪಿ ಶಿವಕುಮಾರ ಕಪ್ಪು ಬಣ್ಣದ ಕ್ರಿಯೇಟಾ ಕಾರು (KA-19-MF-4585) ಅನ್ನು ಗೋಪಾಲಸಿಂಗ್ ಅವರಿಗೆ ನೀಡಿದ್ದು, ಇನ್ನೆರಡು ದಿನಗಳಲ್ಲಿ ಕಾರಿನ ದಾಖಲೆ ಪತ್ರಗಳನ್ನು ಮಾಡಿಸಿಕೊಡುವುದಾಗಿ ಹೇಳಿದ್ದರು ಎನ್ನಲಾಗಿದೆ.
ಆದರೆ ಕೆಲ ಸಮಯದ ಬಳಿಕ ಕಾರಿನ ಮೂಲ ಮಾಲೀಕರು ಬಂದು ಆ ವಾಹನವನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಶಿವಕುಮಾರ ಗೌಂಡರ ಬೇರೆ ಕಾರನ್ನೂ ನೀಡದೆ, ಈ ಹಿಂದೆ ಪಡೆದಿದ್ದ ರೂ.5.05 ಲಕ್ಷ ಹಣವನ್ನೂ ವಾಪಸ್ ನೀಡದೆ ಮೋಸ ಮಾಡಿದ್ದಾರೆ ಎಂದು ಗೋಪಾಲಸಿಂಗ್ ಆರೋಪಿಸಿದ್ದಾರೆ.
ಈ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


