ಬನವಾಸಿ: ರಸ್ತೆಯಲ್ಲಿ ಬೈಕ್ ಓಡಿಸುವಾಗ ಹೆಲ್ಮೆಟ್ ತಲೆಯ ಮೇಲಿರಬೇಕು ಎಂಬ ನಿಯಮ ಗೊತ್ತಿದ್ದರೂ ಕೆಲವರು ಅದನ್ನು ಮರೆತುಬಿಡುತ್ತಾರೆ. ಆದರೆ ಪೊಲೀಸರ ತಪಾಸಣೆ ಎದುರಾದಾಗ ಮಾತ್ರ ನಿಯಮ ನೆನಪಾಗುತ್ತದೆ! ಇಂತಹ ಸವಾರರಿಗೆ ಮಂಗಳವಾರ ಬನವಾಸಿಯಲ್ಲಿ ದಂಡದ ಬಿಸಿ ತಟ್ಟಿತು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬನವಾಸಿ ಪೊಲೀಸರು ವಾಹನ ತಪಾಸಣೆ ನಡೆಸಿ, ಸಂಚಾರ ನಿಯಮ ಉಲ್ಲಂಘಿಸಿದ ಬೈಕ್ ಸವಾರರ ವಿರುದ್ಧ ಕ್ರಮ ಕೈಗೊಂಡರು. ಈ ವೇಳೆ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು, ಅಗತ್ಯ ದಾಖಲೆಗಳನ್ನು ಹೊಂದಿರದಿರುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳು ಪತ್ತೆಯಾಗಿದ್ದು, ಸವಾರರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು.
ಪೊಲೀಸರ ತಪಾಸಣೆಯಿಂದಾಗಿ ನಿಯಮ ಪಾಲಿಸದೆ ವಾಹನ ಚಲಾಯಿಸುತ್ತಿದ್ದ ಸವಾರರು ಕೆಲಕಾಲ ಪರದಾಡುವಂತಾಯಿತು. ದಂಡ ವಿಧಿಸುವುದರ ಜೊತೆಗೆ ಮುಂದೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸರು ಸೂಚಿಸಿದರು.
ಈ ಸಂದರ್ಭದಲ್ಲಿ ಪಿಎಸ್‌ಐ ಮಹಾಂತಪ್ಪ ಕುಂಬಾರ ಮಾತನಾಡಿ, ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬಾರದು. ಅತಿವೇಗದ ಹಾಗೂ ಅಪಾಯಕಾರಿ ರೀತಿಯ ಚಾಲನೆಯನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ತಿಳಿಸಿದರು.
ವಾಹನದ ನೋಂದಣಿ ಪ್ರಮಾಣಪತ್ರ, ಚಾಲನಾ ಪರವಾನಗಿ, ವಿಮೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಹೊಂದಿರುವುದು ಕಡ್ಡಾಯ. ಸಂಚಾರ ನಿಯಮಗಳು ಕೇವಲ ದಂಡ ವಿಧಿಸುವ ಉದ್ದೇಶದಿಂದ ರೂಪಿಸಲಾಗಿಲ್ಲ. ಸವಾರರು ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.
ನಿಯಮ ಪಾಲನೆಯಿಂದ ರಸ್ತೆ ಅಪಘಾತಗಳನ್ನು ನಿಯಂತ್ರಿಸುವುದರ ಜೊತೆಗೆ ಅಮೂಲ್ಯ ಜೀವಗಳನ್ನು ರಕ್ಷಿಸಬಹುದು. ಆದ್ದರಿಂದ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂಬ ಭಯದಿಂದ ಮಾತ್ರವಲ್ಲದೆ, ತಮ್ಮ ಹಾಗೂ ಇತರರ ಸುರಕ್ಷತೆಯ ದೃಷ್ಟಿಯಿಂದ ಪ್ರತಿಯೊಬ್ಬ ವಾಹನ ಸವಾರರೂ ಸ್ವಯಂಪ್ರೇರಿತವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಪಿಎಸ್‌ಐ ಮಹಾಂತಪ್ಪ ಕುಂಬಾರ ಸೂಚಿಸಿದರು.