ಅಂಕೋಲಾ: ಜಮೀನು ಮಾಲೀಕರಂತೆ ಸುಳ್ಳು ವ್ಯಕ್ತಿಗಳನ್ನು ಬಿಂಬಿಸಿ, ನಕಲಿ ಸಹಿ ಹಾಗೂ ದಾಖಲೆಗಳನ್ನು ಬಳಸಿ ಜಮೀನು ಮಾರಾಟ ಮಾಡಿ ವಂಚಿಸಿದ ಆರೋಪದ ಮೇಲೆ ಐವರನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ.
ಬೊಗ್ರಿಬೈಲ್ ಗ್ರಾಮದ ಸರ್ವೆ ನಂ.79/ಅ4ರಲ್ಲಿರುವ 1 ಎಕರೆ 14 ಗುಂಟೆ ಜಮೀನು ಪಿರ್ಯಾದಿದಾರರ ಕುಟುಂಬಕ್ಕೆ ಸೇರಿದ್ದಾಗಿದೆ. ಈ ಆಸ್ತಿಯನ್ನು ಅಂಕೋಲಾ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪಿರ್ಯಾದಿದಾರರು ಹಾಗೂ ಅವರ ಸಹೋದರರೇ ಎಂಬಂತೆ ಸುಳ್ಳು ವ್ಯಕ್ತಿಗಳನ್ನು ಹಾಜರುಪಡಿಸಿ, ನಕಲಿ ಸಹಿ ಹಾಗೂ ದಾಖಲೆಗಳನ್ನು ಸಲ್ಲಿಸಿ ಮಾರಾಟ ಮಾಡಲಾಗಿದೆ ಎಂಬ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಮೇಲಾಧಿಕಾರಿಗಳ ಆದೇಶದಂತೆ ಆರೋಪಿಗಳ ಪತ್ತೆಗೆ ಕಾರವಾರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್.ಎ. ಗಿರೀಶ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತಂಡವು ಸಿಸಿಟಿವಿ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಮಾಹಿತಿಗಳನ್ನು ಪರಿಶೀಲಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದೆ.
ತನಿಖೆಯ ಆಧಾರದ ಮೇಲೆ ಪ್ರಕರಣದ ಪ್ರಮುಖ ಆರೋಪಿತ ಬಾಳೆಗುಳಿಯ ಮಂಜುನಾಥ ಆನಂದು ಗೌಡ ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಅಂಕೋಲಾ ಉಪ ನೋಂದಣಾಧಿಕಾರಿ ಕಚೇರಿಯ ಡಾಟಾ ಎಂಟ್ರಿ ಆಪರೇಟರ್ ಶಂಕರ ರಾಮದಾಸ ಅಣೇಕರ, ಚೆನ್ನಪ್ಪ @ ರವಿ ಜಟ್ಟಿ ನಾಯ್ಕ, ದರ್ಶನ ನಾರಾಯಣ ಗೌಡ ಹಾಗೂ ಯಂಕು ಹುಲಿಯಾ ಗೌಡ ಅವರನ್ನು ಬಂಧಿಸಲಾಗಿದೆ.
ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿ ಆರೋಪಿಗಳನ್ನು ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಎಸ್.ಎ. ಗಿರೀಶ್ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಚಂದ್ರಶೇಖರ ಮಠಪತಿ, ಪಿಎಸ್‌ಐಗಳಾದ ಗುರುನಾಥ ಹಾದಿಮನಿ, ವಿಶ್ವನಾಥ ನಿಂಗೋಳ್ಳಿ, ಲಲಿತಾ ರಜಪೂತ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಮೊಹಮ್ಮದ್ ಶಫಿ ಶೇಖ್, ಮಹಾದೇವ ಸಿದ್ದಿ ಹಾಗೂ ಗಿರೀಶ ಲಮಾಣಿ ಅವರು ಭಾಗವಹಿಸಿದ್ದರು.
ಆರೋಪಿತರ ಪತ್ತೆ ಹಾಗೂ ಬಂಧನದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.