ಹೊನ್ನಾವರ: ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಿಲೆಕ್ಟ್ ಫೌಂಡೇಶನ್ (ರಿ.) ಹಾಗೂ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ 14 ದಿನಗಳ ಉಚಿತ ಕೃತಕ ಆಭರಣ ತಯಾರಿಕೆ ತರಬೇತಿ ಕಾರ್ಯಕ್ರಮ ಸೆ.30ರಂದು ಯಶಸ್ವಿಯಾಗಿ ಸಂಪನ್ನಗೊಂಡಿತು.
ಮಹಿಳೆಯರಲ್ಲಿ ಸ್ವಾವಲಂಬನೆ ಹಾಗೂ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸೆ.17ರಿಂದ 30ರವರೆಗೆ ನಡೆದ ತರಬೇತಿಯಲ್ಲಿ ಕೃತಕ ಆಭರಣಗಳ ವಿನ್ಯಾಸ, ತಯಾರಿಕೆ ಸೇರಿದಂತೆ ಸಂಬಂಧಿತ ಕೌಶಲ್ಯಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ಸ್ವಉದ್ಯೋಗ ಆರಂಭಿಸಲು ಅಗತ್ಯವಾದ ಕೌಶಲ್ಯ, ಉದ್ಯಮಶೀಲತೆ ಬೆಳೆಸುವ ಮಾರ್ಗಗಳು ಹಾಗೂ ಆದಾಯದ ಸ್ವಾವಲಂಬನೆಗೆ ನೆರವಾಗುವ ಕೌಶಲ್ಯಗಳ ಕುರಿತು ತರಬೇತಿ ನೀಡಲಾಯಿತು.
ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳು ಹಾಗೂ ಸಿಲೆಕ್ಟ್ ಫೌಂಡೇಶನ್ (ರಿ.) ಅಧ್ಯಕ್ಷರಾದ ಶ್ರೀ ಶ್ರೀ ಮಾರುತಿ ಗುರೂಜಿಯವರು ವಹಿಸಿದ್ದರು.
ಆರ್ಸಿಟಿ ನಿರ್ದೇಶಕ ಹರೀಶ್ ಕುಮಾರ, ಉಪನ್ಯಾಸಕರಾದ ಮಮತಾ ನಾಯ್ಕ ಮತ್ತು ಗೌರೀಶ್ ನಾಯ್ಕ, ಎನ್ಆರ್ಎಲ್ಎಂ ಮೇಲ್ವಿಚಾರಕರಾದ ಬಾಲಚಂದ್ರ ನಾಯ್ಕ ಮತ್ತು ಮೇಘನಾ ಭಟ್ಟ, ತರಬೇತಿ ಮೌಲ್ಯಮಾಪಕರಾದ ಮಹೇಶ ಹಾಗೂ ಲಲಿತಮ್ಮ, ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ ಕನ್ನಿಕಾ ಪಂಡಿತ್, ತರಬೇತಿ ಪಡೆದ ಮಹಿಳೆಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ತರಬೇತಿ ಪಡೆದ ಮಹಿಳೆಯರು ತಯಾರಿಸಿದ್ದ ಕೃತಕ ಆಭರಣಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಿತು. ಆಭರಣಗಳನ್ನು ವೀಕ್ಷಿಸಿ ಖರೀದಿಸಲು ಆಗಮಿಸಿದ್ದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಹಿಳೆಯರ ಕೌಶಲ್ಯವನ್ನು ಶ್ಲಾಘಿಸಿದ ಗಣ್ಯರು, ಇಂತಹ ತರಬೇತಿಗಳು ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಸುವುದರ ಜೊತೆಗೆ ಸ್ವಾವಲಂಬಿ ಬದುಕಿಗೆ ನೆರವಾಗಲಿವೆ ಎಂದು ಅಭಿಪ್ರಾಯಪಟ್ಟರು.
ತರಬೇತಿ ಪಡೆದ ಮಹಿಳೆಯರು ತಾವು ಕಲಿತ ಕೌಶಲ್ಯವನ್ನು ಮುಂದಿನ ದಿನಗಳಲ್ಲಿ ಆದಾಯದ ಮೂಲವನ್ನಾಗಿ ಬಳಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
