ಅಂಕೋಲಾ: ಬೇಡ್ತಿ-ಅಘನಾಶಿನಿ ನದಿ ಜೋಡಣೆ ಯೋಜನೆ ವಿರೋಧಿಸಿ ನವೆಂಬರ್ 3ರಂದು ಯಲ್ಲಾಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಅಂಕೋಲಾ ತಾಲೂಕಿನ ಗಡಿಭಾಗದ ಗ್ರಾಮಗಳಲ್ಲಿ ಜಾಗೃತಿ ಸಭೆ ನಡೆಸಲಾಯಿತು.
ಅಚವೆ, ಹಿಲ್ಲೂರು, ಹಳವಳ್ಳಿ ಮತ್ತು ಡೋಂಗ್ರೆ ಭಾಗಗಳ ಪ್ರಮುಖರನ್ನು ಭೇಟಿಯಾದ ಹೋರಾಟದ ಸಂಚಾಲನಾ ಸಮಿತಿಯ ಸದಸ್ಯರು, ಯೋಜನೆಯಿಂದ ಎದುರಾಗಬಹುದಾದ ಪರಿಸರದ ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ, ನವೆಂಬರ್ 3ರ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ಭಟ್ ಮಳಲಗಾಂವ್, ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಗಳಾಗಿರುವ ಬೇಡ್ತಿ, ಅಘನಾಶಿನಿ, ಶರಾವತಿ ಮತ್ತು ವರದಾ ನದಿಗಳು ಸ್ವಚ್ಛಂದವಾಗಿ ಹರಿಯಬೇಕು. ಅವೈಜ್ಞಾನಿಕ ನದಿ ತಿರುವು ಹಾಗೂ ನದಿ ಜೋಡಣೆ ಯೋಜನೆಗಳು ಜಿಲ್ಲೆಯ ಪರಿಸರಕ್ಕೆ ಹಾನಿ ಮಾಡುವುದರ ಜೊತೆಗೆ ಇಲ್ಲಿನ ಜನರ ಬದುಕನ್ನೂ ಸಂಕಷ್ಟಕ್ಕೆ ತಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.
ಜಿಲ್ಲೆಯ ನದಿಗಳು ಮತ್ತು ಪರಿಸರದ ರಕ್ಷಣೆಯ ದೃಷ್ಟಿಯಿಂದ ಯಲ್ಲಾಪುರದಲ್ಲಿ ನಡೆಯಲಿರುವ ಹೆದ್ದಾರಿ ತಡೆ ಹೋರಾಟದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಗೋಪಾಲಕೃಷ್ಣ ವೈದ್ಯ, ವಿನೋದ್ ಭಟ್, ಶಶಾಂಕ್ ಹೆಗಡೆ, ಗಣಪತಿ ಭಟ್ ಕಲ್ಲೇಶ್ವರ, ಬಾಲಚಂದ್ರ ಶೆಟ್ಟಿ ಅಚವೆ, ಎಂ.ಎನ್. ಭಟ್ ಅಚವೆ, ನಾರಾಯಣ ಹೆಗಡೆ ಕರಿಕಲ್, ಭಾಸ್ಕರ್ ಹೆಗಡೆ ಹಿಲ್ಲೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.


