Ad
Ad
Ad
Home Crime ಭಟ್ಕಳ | ದನದ ವಿಚಾರಕ್ಕೆ ಗಲಾಟೆ; ಪರಸ್ಪರ ದೂರು

ಭಟ್ಕಳ | ದನದ ವಿಚಾರಕ್ಕೆ ಗಲಾಟೆ; ಪರಸ್ಪರ ದೂರು

0
20

ಭಟ್ಕಳ: ದನದ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ವ್ಯಕ್ತಿಯೊಬ್ಬರ ನಡುವೆ ಗಲಾಟೆ ನಡೆದಿದ್ದು, ಇಬ್ಬರೂ ಪರಸ್ಪರ ದೂರು ನೀಡಿರುವ ಘಟನೆ ಭಟ್ಕಳದಲ್ಲಿ ನಡೆದಿದೆ. ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Ad

ಸೆ.28ರಂದು ಮಧ್ಯಾಹ್ನ 12.30ರ ಸುಮಾರಿಗೆ ಕೋಕ್ತಿ ನಗರ ಕಡೆಯಿಂದ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ಭಟ್ಕಳ ನಿವಾಸಿ, ಕೂಲಿ ಕೆಲಸ ಮಾಡುವ ರೋಹಿಣಿ ವೆಂಕಟೇಶ ನಾಯ್ಕ (42) ಅವರನ್ನು ಈದ್ಗಾ ಮೈದಾನದ ಸಮೀಪ ದೇವೇಂದ್ರ ನಾಯ್ಕ ಅವರ ಅಂಗಡಿಯ ಬಳಿ ಪರಮೇಶ್ವರ ರಾಮ ನಾಯ್ಕ ಹಾಗೂ ರವಿ ನಿಂಗಪ್ಪ ನಾಯ್ಕ ಎಂಬವರು ಸ್ಕೂಟಿಗೆ ಅಡ್ಡಗಟ್ಟಿ ತಡೆದಿದ್ದಾರೆ ಎಂದು ಮೊದಲ ದೂರಿನಲ್ಲಿ ಆರೋಪಿಸಲಾಗಿದೆ.

ದನದ ವಿಚಾರವಾಗಿ ಮಾತಿನ ಚಕಮಕಿ ನಡೆದ ಸಂದರ್ಭದಲ್ಲಿ ಪರಮೇಶ್ವರ ನಾಯ್ಕ  ಹೆಲ್ಮೆಟ್‌ನಿಂದ ರೋಹಿಣಿ ಅವರ ತಲೆಗೆ ಹೊಡೆದಿದ್ದು, ರವಿ ಅವರು ಕೈ ಹಿಡಿದು ತಿರುಚಿ ದೂಡಿ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಇಬ್ಬರೂ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪ್ರತಿಯಾಗಿ ಜಾಲಿ ನಿವಾಸಿ, ಹೈನುಗಾರಿಕೆ ವೃತ್ತಿಯ ಪರಮೇಶ್ವರ ರಾಮ ನಾಯ್ಕ (53) ನೀಡಿರುವ ದೂರಿನಲ್ಲಿ ರೋಹಿಣಿ ನಾಯ್ಕ ವಿರುದ್ಧ ಆರೋಪ ಮಾಡಲಾಗಿದೆ. ರೋಹಿಣಿ ಅವರು ವಾಟ್ಸ್‌ಆ್ಯಪ್‌ನಲ್ಲಿ ತಾನು ಕತ್ತಿ ಇಟ್ಟುಕೊಂಡು ತಿರುಗಾಡುತ್ತಿರುವುದಾಗಿ ಹಾಗೂ ಪರಮೇಶ್ವರ ಮತ್ತು ಅವರ ಮಗ ಸಿಕ್ಕರೆ ಕತ್ತಿಯಿಂದ ಕಡಿಯುವುದಾಗಿ ಸಂದೇಶ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಲ್ಲದೆ, ಸೆ.28ರಂದು ಮಧ್ಯಾಹ್ನ 12.30ರ ಸುಮಾರಿಗೆ ದೇವೇಂದ್ರ ನಾಯ್ಕ ಅವರ ಕಂಪ್ಯೂಟರ್ ಸೆಂಟರ್‌ನಲ್ಲಿ ಇನ್ಸೂರೆನ್ಸ್ ಪ್ರೀಮಿಯಂ ತುಂಬಲು ನಿಂತಿದ್ದಾಗ ರೋಹಿಣಿ ಅವರು ಅಡ್ಡಗಟ್ಟಿ ಚಪ್ಪಲಿಯಿಂದ ದವಡೆಗೆ ಹೊಡೆದು ತುಟಿಗೆ ಗಾಯಪಡಿಸಿದ್ದಾರೆ ಎಂದು ಪರಮೇಶ್ವರ ದೂರಿದ್ದಾರೆ. ತನ್ನ ಹಾಗೂ ತನ್ನ ಮಗನ ಕೈಕಾಲುಗಳನ್ನು ಕತ್ತಿಯಿಂದ ಕಡಿಯುವುದಾಗಿ ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ತನ್ನ ಹೆಂಡತಿ ಹಾಗೂ ಮನೆಯವರಿಗೆ ಅವಾಚ್ಯವಾಗಿ ಬೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ದೂರಿನ ಆಧಾರದಲ್ಲಿಯೂ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!