ಭಟ್ಕಳ: ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಹೆಲ್ಮೆಟ್‌ನಿಂದ ತಲೆಗೆ ಹೊಡೆದು, ಕೈ ಹಿಡಿದು ತಿರುಚಿ ಕೆಳಗೆ ಬೀಳಿಸಿ ಬಳಿಕ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಆರೋಪದಡಿ ಇಬ್ಬರ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳ ನಿವಾಸಿ, ಕೂಲಿ ಕೆಲಸ ಮಾಡುವ ರೋಹಿಣಿ ವೆಂಕಟೇಶ ನಾಯ್ಕ (42) ಅವರು ನೀಡಿದ ದೂರಿನ ಪ್ರಕಾರ, ಸೆ.28ರಂದು ಮಧ್ಯಾಹ್ನ 12.30ರ ಸುಮಾರಿಗೆ ಕೋಕ್ತಿ ನಗರ ಕಡೆಯಿಂದ ಮನೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಭಟ್ಕಳ ಈದ್ಗಾ ಮೈದಾನದ ಸಮೀಪ ದೇವೇಂದ್ರ ನಾಯ್ಕ ಅವರ ಅಂಗಡಿಯ ಬಳಿ ಜಾಲಿಯ ಪರಮೇಶ್ವರ ರಾಮ ನಾಯ್ಕ ಹಾಗೂ ರವಿ ನಿಂಗಪ್ಪ ನಾಯ್ಕ ಎಂಬವರು ನಿಂತಿದ್ದರು.
ಆರೋಪಿಗಳು ಏಕಾಏಕಿ ಸ್ಕೂಟಿಗೆ ಅಡ್ಡಗಟ್ಟಿ ತಡೆದು, ದನದ ವಿಚಾರವಾಗಿ ಆಕ್ಷೇಪಿಸಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ರೋಹಿಣಿ ಅವರು ತಾನು ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡುವುದಾಗಿ ಹೇಳಿದಾಗ, ಆರೋಪಿಗಳು ಇಬ್ಬರೂ ಸೇರಿ ನಮಗೇ ಬುದ್ಧಿ ಹೇಳುತ್ತೀಯಾ ಎಂದು ಆಕ್ಷೇಪಿಸಿ ಜಗಳ ಆರಂಭಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪರಮೇಶ್ವರ ರಾಮ ನಾಯ್ಕ ಕೈಯಲ್ಲಿದ್ದ ಹೆಲ್ಮೆಟ್‌ನಿಂದ ರೋಹಿಣಿ ಅವರ ತಲೆಗೆ ಹೊಡೆದಿದ್ದಲ್ಲದೆ, ರವಿ ನಿಂಗಪ್ಪ ನಾಯ್ಕ ಅವರ ಕೈ ಹಿಡಿದು ತಿರುಚಿ ದೂಡಿ ಹಾಕಿದ್ದು, ಗಮನಿಸಿದ ಅಕ್ಕಪಕ್ಕದವರು ಸ್ಥಳಕ್ಕೆ ಬಂದು ಜಗಳ ಬಿಡಿಸಿದ್ದಾರೆ ಎನ್ನಲಾಗಿದೆ.
ಬಳಿಕ ಅಲ್ಲಿಂದ ತೆರಳುವ ವೇಳೆ ಆರೋಪಿಗಳು, ಕೊಲೆ ಮಾಡಿ ಬಿಸಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ರೋಹಿಣಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


