ಮಟ್ಕಾ ಬುಕ್ಕಿಗಳ ಆಟಕ್ಕೆ ಬ್ರೇಕ್
ಭಟ್ಕಳ: ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಓ.ಸಿ. ಮಟ್ಕಾ ಜೂಜಾಟ ನಡೆಸುತ್ತಿದ್ದ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಭಟ್ಕಳ ಶಹರ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದು, ನಗದು ಹಣ ಹಾಗೂ ಜೂಜಾಟದ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮೊದಲ ಪ್ರಕರಣದಲ್ಲಿ, ಜುಲೈ 28ರಂದು ಮಧ್ಯಾಹ್ನ ಸುಮಾರು 12.50 ಗಂಟೆಗೆ ಭಟ್ಕಳದ ಗುಳ್ಮೀ ರೈಲ್ವೆ ಬ್ರಿಡ್ಜ್ ಸಮೀಪ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಮಾರುಕೇರಿಯ ಕೃಷ್ಣ ಸಣ್ಣು ಗೊಂಡ ಎಂಬಾತ ಸಾರ್ವಜನಿಕರಿಂದ ಹಣ ಪಡೆದು ಓ.ಸಿ. ಮಟ್ಕಾ ಜೂಜಾಟ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದರು. ಆರೋಪಿಯಿಂದ ₹1,150 ನಗದು ಹಾಗೂ ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎರಡನೇ ಪ್ರಕರಣದಲ್ಲಿ, ಅದೇ ದಿನ ಮಧ್ಯಾಹ್ನ 12.55 ಗಂಟೆಗೆ ಗುಳ್ಮೇ ರೋಡ್ ಬ್ರಿಡ್ಜ್ ಬಳಿ ಕಡಸಲಗದ್ದೆಯ ಗೋಯ್ದಾ ಬಿಳಿಯಾ ದೇವಾಡಿಗ ಎಂಬಾತ ಮಟ್ಕಾ ಜೂಜಾಟ ನಡೆಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದು, ₹1,050 ನಗದು ಹಾಗೂ ಜೂಜಾಟದ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂರನೇ ಪ್ರಕರಣದಲ್ಲಿ, ಮಧ್ಯಾಹ್ನ 3.45 ಗಂಟೆಗೆ ಗುಳ್ಮೆ ಕ್ರಾಸ್ ಬಳಿ ತಲಾನ ಮುಟ್ಟಳ್ಳಿಯ ಅಶೋಕ ವೆಂಕಟೇಶ ನಾಯ್ಕ ಎಂಬಾತ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಜೂಜಾಟ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ₹810 ನಗದು ಹಾಗೂ ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.