ಕಾರವಾರ: ಆಯುರ್ವೇದ ಚಿಕಿತ್ಸೆಯಲ್ಲಿ ನೈಸರ್ಗಿಕ ಗಿಡಮೂಲಿಕೆಗಳ ಔಷಧೀಯ ಸತ್ವಗಳನ್ನು ಬಳಸುವುದರಿಂದ ಆರೋಗ್ಯ ರಕ್ಷಣೆಗೆ ನೈಸರ್ಗಿಕ ಪರಿಹಾರ ದೊರೆಯುತ್ತದೆ ಎಂದು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಶಂಕರ್ ರಾವ್ ಹೇಳಿದರು.
ಕಾರವಾರದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ, ಕಾರವಾರ ಆಯುಷ್ ವೈದ್ಯಾಧಿಕಾರಿಗಳ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದವು ಭಾರತದ ಪುರಾತನ ವೈದ್ಯಕೀಯ ಪದ್ಧತಿಯಾಗಿದ್ದು, ಅಲೋಪತಿ ಚಿಕಿತ್ಸಾ ಪದ್ಧತಿ ವ್ಯಾಪಕವಾಗುವುದಕ್ಕೂ ಮುನ್ನ ಭಾರತದಲ್ಲಿ ಜನರು ರೋಗ ನಿವಾರಣೆಗಾಗಿ ಆಯುರ್ವೇದವನ್ನೇ ಅವಲಂಬಿಸಿದ್ದರು. ನಮ್ಮಲ್ಲೇ ಇರುವ ಈ ವೈದ್ಯಕೀಯ ಪದ್ಧತಿಯನ್ನು ಕಡೆಗಣಿಸುವ ಮನೋಭಾವ ಬದಲಾಗಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಗದೀಶ ಯಾಜಿ, ಹಿಂದಿನ ಕಾಲದಲ್ಲಿ ಕೃಷಿ ಹಾಗೂ ದೈಹಿಕ ಶ್ರಮದಿಂದ ಜನರು ಸದೃಢರಾಗಿದ್ದರು. ಆದರೆ ಇಂದಿನ ದಿನಗಳಲ್ಲಿ ಮಕ್ಕಳು ಮೈದಾನದ ಆಟಗಳಿಂದ ದೂರವಾಗಿ ಮೊಬೈಲ್ ಬಳಕೆ ಹಾಗೂ ಜಂಕ್ ಫುಡ್ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದರಿಂದ ಯುವತಿಯರಲ್ಲಿ ಪಿಸಿಒಡಿ, ಥೈರಾಯ್ಡ್ ಸೇರಿದಂತೆ ಹಲವು ಸಮಸ್ಯೆಗಳು ಕಂಡುಬರುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಲಿತಾ ಶೆಟ್ಟಿ ಹಾಗೂ ಡಿ. ದರ್ಜೆ ನೌಕರರಾದ ಸುಜಾತಾ ನಾಯ್ಕ ಮತ್ತು ಪುಷ್ಪಾ ಮುಕ್ರಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಶಿರಸ್ತೆದಾರ ಪ್ರಮೋದ ನಾಯ್ಕ, ಜಿಲ್ಲಾ ಆಯುಷ್ ಇಲಾಖೆ ಆಡಳಿತಾಧಿಕಾರಿ ಹಾಗೂ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸಂಜೀವ ಕುಮಾರ ನಾಯಕ, ವೈದ್ಯಾಧಿಕಾರಿಗಳಾದ ಡಾ. ಪೂರ್ಣಿಮಾ ಎಸ್.ಬಿ., ಡಾ. ಭಾರತಿ ಪಿ.ಬಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮುಂಡಗೋಡ ತಾಲೂಕು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಯೋಗೇಶ್ ಮಡಗಾಂವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


