Friday, July 24, 2026
Join WhatsApp Group
HomeLocal Newsಮುರಿನಕಟ್ಟೆ ಘಟನೆಗೆ ಕಾಂಗ್ರೆಸ್‌ ಸರ್ಕಾರವೇ ಹೊಣೆ

ಮುರಿನಕಟ್ಟೆ ಘಟನೆಗೆ ಕಾಂಗ್ರೆಸ್‌ ಸರ್ಕಾರವೇ ಹೊಣೆ

ಯಲ್ಲಾಪುರ: ಕಾಂಗ್ರೆಸ್‌ ಸರ್ಕಾರದಿಂದ ಗಲಭೆಕೋರರನ್ನು, ಸಮಾಜದಲ್ಲಿ ಶಾಮತಿ ಕದಡುವವರನ್ನು, ಮತಾಂಧರನ್ನು ರಕ್ಷಿಸುವ ಕೆಲಸವಾಗುತ್ತಿದೆ ಎಂದು ಬಿಜೆಪಿ ಯಲ್ಲಾಪುರ ಮಂಡಲದ ಅಧ್ಯಕ್ಷ ಪ್ರಸಾದ ಹೆಗಡೆ ಆರೋಪಿಸಿದ್ದಾರೆ.

ಬಿಜೆಪಿ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಭಟ್ಕಳದಲ್ಲಿ ಭಯ ಹುಟ್ಟಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಭಟ್ಕಳದ ಮುರಿನಕಟ್ಟೆ ಗಲಭೆಯಲ್ಲಿ ಭಾಗಿಯಾದ ನಿಜವಾದ ಅಪರಾಧಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮವಾಗಬೇಕಿದೆ. ಶಾಂತಿಯುತವಾಗಿಯೇ ಇದ್ದ ಭಟ್ಕಳದಲ್ಲಿ ಗಲಭೆಕೋರರಿಗೆ ಪ್ರಚೋದನೆ ಸಿಗುತ್ತಿದೆ. ಅಲ್ಲಿ ನಡೆದ ಘಟನೆಗೆ ಕಾಂಗ್ರೆಸ್‌ ಸರ್ಕಾರವೇ ಸಂಪೂರ್ಣ ಹೊಣೆ. ಮುಸ್ಲಿಂ ಸಮುದಾಯದ ಮೇಲಿನ ಅತಿಯಾದ ಪ್ರೀತಿಯೇ ಅಲ್ಲಿ ಮತ್ತೆ ಅಶಾಂತಿ ಮೂಡಲು ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂದು ಸಾವಿರಾರು ಗಲಭೆಕೋರರು ಒಟ್ಟಾಗಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವುದು ಅಕ್ಷಮ್ಯ. ಘಟನೆಯನ್ನು ಖಂಡಿಸಿ ಮೇ. 29ರಂದು ಭಾರತೀಯ ಜನತಾ ಪಾರ್ಟಿ ಉತ್ತರಕನ್ನಡ ವತಿಯಿಂದ ಮುರಿನಕಟ್ಟೆ ಧ್ವಂಸ ವಿರೋಧಿಸಿ ಮತ್ತು ಮರುಸ್ಥಾಪನೆಗೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್‌.ಎಸ್‌.ಹೆಗಡೆ ಕರ್ಕಿ, ಉಪಾಧ್ಯಕ್ಷೆ ರೂಪಾಲಿ ನಾಯ್ಕ ಸೇರಿದಂತೆ ಪಕ್ಷದ ಜಿಲ್ಲಾ ಮುಖಂಡರು ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ.

ಭಟ್ಕಳದ ಆಟೋ ಚಾಲಕರ ಗಣೇಶೋತ್ಸವ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಪ್ರತಿಭಟನೆ ನಡೆಯಲಿದ್ದು, ಭಟ್ಕಳದ ಸಮಸ್ತ ಹಿಂದೂಗಳ ಧ್ವನಿಯಾಗಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ರಾಜ್ಯ ನಾಯಕ ಆರ್.‌ ಅಶೋಕ್‌ ಪಾಲೊಳ್ಳಲಿದ್ದಾರೆ.

ಯಲ್ಲಾಪುರದಿಂದಲೂ ನೂರಾರು ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದು, ಭಟ್ಕಳದ ಹಿಂದೂ ಬಾಂಧವರ ಧ್ವನಿಯಾಗುತ್ತೇವೆ ಎಂದರು.

ಹಿರಿಯ ಮುಖಂಡ ರಾಮು ನಾಯ್ಕ ಮಾತನಾಡಿ, ಭಟ್ಕಳದಲ್ಲಿ ಹಿಂದೂಗಳ ಧಾರ್ಮಿಕ ಸ್ಥಳವನ್ನು ದುಷ್ಕರ್ಮಿಗಳು ಭಗ್ನಗೊಳಿಸಿ, ಹಲವು ವರ್ಷಗಳಿಂದ ಶಾಂತಿಯುತವಾಗಿದ್ದ ವಾತಾವರಣವನ್ನು ಹದಗೆಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಸಮಯದಲ್ಲಿಯೇ ಈ ಮುರಿನಕಟ್ಟೆಯನ್ನು ಸ್ಥಳಾಂತರಿಸಲಾಗಿದೆ. ಇದರಿಂದ ಯಾರಿಗೂ ಸಮಸ್ಯೆಯಾಗಿಲ್ಲ. ಈ ಘಟನೆಗಳ ಹಿಂದೆ ಧರ್ಮಾಂಧರ, ದುಷ್ಕರ್ಮಿಗಳ ದುಷ್ಟ ಉದ್ದೇಶವಿದೆ ಎಂದರು.

ಇಡೀ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು, ಮುಖಂಡರು, ಧಾರ್ಮಿಕ ಭಾವನೆ ಹೊಂದಿರುವ ಸಹಸ್ರ ಸಂಖ್ಯೆಯ ಹಿಂದೂ ಬಾಂಧವರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದೇವೆ. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಘಟನೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಶ್ಯಾಮಿಲಿ ಪಾಠಣಕರ ಮಾತನಾಡಿ, ಘಟನೆಯ ಬಗ್ಗೆ ಖಂಡನೆ ವ್ಯಕ್ತಪಡಿಸಿ, ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸೋಮು ನಾಯ್ಕ, ರಜತ್‌ ಬದ್ದಿ, ಕೆ.ಟಿ. ಹೆಗಡೆ, ಗಣೇಶ ಪಾಠಣಕರ, ಶಿವಲಿಂಗಯ್ಯ ಎಸ್.‌ಅಲ್ಲಯ್ಯನಮಠ ಇದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share