ಸರ್ಕಾರವು ಏಪ್ರಿಲ್ 16ರಿಂದ ಜನಗಣತಿ ಮಾಹಿತಿ ಸಂಗ್ರಹ ಕಾರ್ಯವನ್ನು ಆರಂಭಿಸಲಿದ್ದು, ಅಧಿಕೃತ ಸಿಬ್ಬಂದಿಗಳು ಮನೆಮನೆಗೆ ಭೇಟಿ ನೀಡಿ ಕುಟುಂಬ ಹಾಗೂ ವಾಸಸ್ಥಳಕ್ಕೆ ಸಂಬಂಧಿಸಿದ ಮೂಲಭೂತ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.
ಈ ಪ್ರಕ್ರಿಯೆ ದೇಶದ ಜನಸಂಖ್ಯೆ, ವಾಸಸ್ಥಿತಿ, ಮೂಲಸೌಕರ್ಯ ಹಾಗೂ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಸಮಗ್ರ ಅಂಕಿ-ಅಂಶಗಳನ್ನು ಸಿದ್ಧಪಡಿಸಲು ಮಹತ್ವದ್ದಾಗಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.
ಮಾಹಿತಿ ಸಂಗ್ರಹದ ವೇಳೆ ಕಟ್ಟಡ ಸಂಖ್ಯೆ, ಜನಗಣತಿ ಮನೆ ಸಂಖ್ಯೆ, ಮನೆಯ ನೆಲ, ಗೋಡೆ ಹಾಗೂ ಮೇಲ್ಛಾವಣಿಯ ಪ್ರಮುಖ ವಸ್ತು, ಮನೆಯ ಬಳಕೆ, ಮನೆಯ ಸ್ಥಿತಿ, ಕುಟುಂಬ ಸಂಖ್ಯೆ, ಕುಟುಂಬದಲ್ಲಿ ಸಾಮಾನ್ಯವಾಗಿ ವಾಸಿಸುವ ಸದಸ್ಯರ ಸಂಖ್ಯೆ, ಕುಟುಂಬ ಮುಖ್ಯಸ್ಥರ ಹೆಸರು, ಲಿಂಗ ಹಾಗೂ ಅವರು ಎಸ್‌ಸಿ, ಎಸ್‌ಟಿ ಅಥವಾ ಇತರೆ ವರ್ಗಕ್ಕೆ ಸೇರಿದವರೇ ಎಂಬ ಮಾಹಿತಿ ಕೇಳಬಹುದು.
ಇದಲ್ಲದೆ, ಮನೆಯ ಮಾಲೀಕತ್ವದ ಸ್ಥಿತಿ, ಮನೆಯಲ್ಲಿ ಇರುವ ಕೊಠಡಿಗಳ ಸಂಖ್ಯೆ, ವಾಸಿಸುವ ವಿವಾಹಿತ ಜೋಡಿಗಳ ಸಂಖ್ಯೆ, ಕುಡಿಯುವ ನೀರಿನ ಮೂಲ, ಅದರ ಲಭ್ಯತೆ, ವಿದ್ಯುತ್ ಅಥವಾ ಬೆಳಕಿನ ಪ್ರಮುಖ ಮೂಲ, ಶೌಚಾಲಯದ ಸೌಲಭ್ಯ ಹಾಗೂ ಅದರ ಪ್ರಕಾರದ ಕುರಿತು ಪ್ರಶ್ನೆಗಳು ಕೇಳುವ ಸಾಧ್ಯತೆ ಇದೆ.
ಸಾರ್ವಜನಿಕರು ಅಧಿಕೃತ ಸಿಬ್ಬಂದಿಗಳಿಗೆ ಅಗತ್ಯವಿರುವ ಈ ಮಾಹಿತಿಯನ್ನು ಮಾತ್ರ ನೀಡಬೇಕು. ಆದರೆ ಈ ಸಂದರ್ಭದಲ್ಲಿ ಮೋಸಗಾರರಿಂದ ಎಚ್ಚರಿಕೆಯಿಂದಿರುವುದು ಸಹ ಅಷ್ಟೇ ಮುಖ್ಯವಾಗಿದೆ.
ಜನಗಣತಿ ಹೆಸರಿನಲ್ಲಿ ಮನೆಗಳಿಗೆ ಬರುವ ಕೆಲವರು ವೈಯಕ್ತಿಕ ಅಥವಾ ಹಣಕಾಸು ಮಾಹಿತಿಯನ್ನು ಕೇಳುವ ಸಾಧ್ಯತೆ ಇರುವುದರಿಂದ, ಮೊಬೈಲ್ ಸಂಖ್ಯೆ, ಪ್ಯಾನ್ ವಿವರಗಳು, ಆಧಾರ್ ಸಂಖ್ಯೆ, OTP, ಬ್ಯಾಂಕ್ ಖಾತೆ ಮಾಹಿತಿ ಅಥವಾ ಯಾವುದೇ ಹಣಕಾಸು ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಸೂಚಿಸಲಾಗಿದೆ.
ಅದೇ ರೀತಿ, ಅಪರಿಚಿತರಿಂದ ಮೊಬೈಲ್‌ಗೆ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಅಧಿಕೃತ ಜನಗಣತಿ ಸಿಬ್ಬಂದಿಗಳು ಸಾಮಾನ್ಯವಾಗಿ ವೈಯಕ್ತಿಕ ಹಣಕಾಸು ಮಾಹಿತಿ ಅಥವಾ ರಹಸ್ಯ ದಾಖಲೆಗಳನ್ನು ಕೇಳುವುದಿಲ್ಲ.
ಮೇಲ್ಕಂಡ ಪ್ರಶ್ನೆಗಳ ಹೊರತಾಗಿ ಹೆಚ್ಚಿನ ಮಾಹಿತಿ ಕೇಳಿದರೆ, ಸಾರ್ವಜನಿಕರು ವಿನಮ್ರವಾಗಿ ನಿರಾಕರಿಸಿ ಯಾವುದೇ ಮಾಹಿತಿ ನೀಡದೆ ಎಚ್ಚರಿಕೆಯಿಂದ ವರ್ತಿಸಬೇಕು.
ಯಾವುದೇ ಅನುಮಾನಾಸ್ಪದ ಘಟನೆಗಳು ಕಂಡುಬಂದಲ್ಲಿ ತಕ್ಷಣ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಲಹೆ ನೀಡಲಾಗಿದೆ. ಜನಗಣತಿ ಕಾರ್ಯವು ದೇಶದ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಾದ ಮಹತ್ವದ ಅಂಕಿ-ಅಂಶಗಳನ್ನು ಒದಗಿಸುವ ಪ್ರಕ್ರಿಯೆಯಾಗಿರುವುದರಿಂದ, ಸಾರ್ವಜನಿಕರು ಜಾಗರೂಕರಾಗಿ ಸಹಕರಿಸುವುದು ಅಗತ್ಯವಾಗಿದೆ.