Ad
Ad
Ad
Home Local News ಚಂಡಮಾರುತ ಅಣಕು ಕಾರ್ಯಾಚರಣೆಗೆ ಜಿಲ್ಲಾಡಳಿತ ಸಜ್ಜು

ಚಂಡಮಾರುತ ಅಣಕು ಕಾರ್ಯಾಚರಣೆಗೆ ಜಿಲ್ಲಾಡಳಿತ ಸಜ್ಜು

0
21

ಕಾರವಾರ: ಚಂಡಮಾರುತ ಹಾಗೂ ಅದರಿಂದ ಉಂಟಾಗಬಹುದಾದ ವಿಪತ್ತುಗಳ ಕುರಿತು ಅಕ್ಟೋಬರ್ 1ರಂದು ಜಿಲ್ಲೆಯಲ್ಲಿ ನಡೆಯಲಿರುವ ಅಂತಾರಾಜ್ಯ ಮಟ್ಟದ ಅಣಕು ಕಾರ್ಯಾಚರಣೆಯಲ್ಲಿ ಯಾವುದೇ ಲೋಪಗಳಿಗೆ ಆಸ್ಪದ ನೀಡದೆ, ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚಿಸಿದರು.

Ad

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಚಂಡಮಾರುತ ವಿಪತ್ತು ನಿರ್ವಹಣೆ ಅಣಕು ಕಾರ್ಯಾಚರಣೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ನಿರ್ದೇಶನದಂತೆ ಅಂತಾರಾಜ್ಯ ಮಟ್ಟದ ಅಣಕು ಕಾರ್ಯಾಚರಣೆ ನಡೆಯಲಿದೆ.

ಕಾರವಾರದ ಕ್ರಿಮ್ಸ್ ಆಸ್ಪತ್ರೆ, ಕುಮಟಾ ಬಸ್ ನಿಲ್ದಾಣ, ಹೊನ್ನಾವರದ ಕಾಸರಕೋಡು ಹಿನ್ನೀರಿನ ಪ್ರದೇಶ, ಮುರುಡೇಶ್ವರ ಬೀಚ್, ತದಡಿ ಬಂದರು ಹಾಗೂ ಅಂಕೋಲಾ ರೈಲ್ವೆ ನಿಲ್ದಾಣಗಳಲ್ಲಿ ಅಣಕು ಕಾರ್ಯಾಚರಣೆಯ ವಿವಿಧ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅಣಕು ಕಾರ್ಯಾಚರಣೆಯ ಅಂಗವಾಗಿ ಸಾರ್ವಜನಿಕರ ರಕ್ಷಣೆ, ಪುನರ್ವಸತಿ, ಸ್ಥಳಾಂತರ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಸ್ಥಳಗಳನ್ನು ಗುರುತಿಸಿ, ಬೇಕಾದ ಸಂಪನ್ಮೂಲಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಎಲ್ಲ ಚಟುವಟಿಕೆಗಳಲ್ಲಿ ಆಪದ್ ಮಿತ್ರರು ಹಾಗೂ ಸ್ವಯಂಸೇವಾ ಸಂಘಟನೆಗಳ ಸದಸ್ಯರ ನೆರವು ಪಡೆಯಬೇಕು ಎಂದು ಅವರು ಸೂಚಿಸಿದರು.

ವಿಪತ್ತು ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆ ಹಾಗೂ ವೈದ್ಯಕೀಯ ನೆರವು ಒದಗಿಸಲು ಜಿಲ್ಲಾಡಳಿತ ಎಷ್ಟು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ ಎಂಬುದನ್ನು ಪರೀಕ್ಷಿಸಿಕೊಳ್ಳುವ ಉದ್ದೇಶದಿಂದ ಈ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದ್ದರಿಂದ ಎಲ್ಲಾ ಅಧಿಕಾರಿಗಳು ನೈಜ ವಿಪತ್ತಿನ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ರೀತಿಯಲ್ಲಿಯೇ ತಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಹಾಗೂ ಯಾವುದೇ ರೀತಿಯ ನಿರ್ಲಕ್ಷ್ಯ ತೋರಬಾರದು ಎಂದು ಅವರು ಹೇಳಿದರು.

ಅಣಕು ಕಾರ್ಯಾಚರಣೆಯಲ್ಲಿ ಕಂದಾಯ, ಪೊಲೀಸ್, ಅಗ್ನಿಶಾಮಕ ಸೇರಿದಂತೆ ಒಟ್ಟು 34 ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಲಿದ್ದಾರೆ. ಪ್ರತಿಯೊಂದು ಸ್ಥಳದಲ್ಲಿ ನಡೆಯುವ ಅಣಕು ಕಾರ್ಯಾಚರಣೆಗೆ ಉಪ ವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್‌ಗಳನ್ನು ಇನ್ಸಿಡೆಂಟ್ ಕಮಾಂಡರ್‌ಗಳಾಗಿ ನೇಮಕ ಮಾಡಲಾಗಿದೆ. ಸಂಪೂರ್ಣ ಕಾರ್ಯಾಚರಣೆಯ ಪರಿಶೀಲನೆ ಹಾಗೂ ವೀಕ್ಷಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ವಿಶೇಷ ವೀಕ್ಷಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಚಂಡಮಾರುತದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಸಾರ್ವಜನಿಕರ ರಕ್ಷಣೆ ಹಾಗೂ ವೈದ್ಯಕೀಯ ನೆರವಿನ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಮೂಲಕ ವಿಪತ್ತಿನಿಂದ ಸಂಭವಿಸಬಹುದಾದ ಹಾನಿಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!