Friday, October 23, 2026
HomeLocal Storyಒಂದೇ ವಿಗ್ರಹ, ಎರಡು ಮುಖದ ಚಾಮುಂಡಿ!

ಒಂದೇ ವಿಗ್ರಹ, ಎರಡು ಮುಖದ ಚಾಮುಂಡಿ!

ಗೇರುಸೊಪ್ಪೆಯ ಕಾಡಿನ ನಡುವೆ ಅಪರೂಪದ ತಾಯಿ

ಒಂದು ದೇವಿಯ ಮೂರ್ತಿಗೆ ಎರಡು ಮುಖಗಳಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಒಂದು ಕಡೆ ನೋಡಿದರೆ ತಾಯಿಯ ಮುಖದಲ್ಲಿ ಸೌಮ್ಯತೆ ಕಾಣಿಸುತ್ತದೆ. ಅದೇ ಶಿಲೆಯ ಇನ್ನೊಂದು ಬದಿಗೆ ಹೋದರೆ ಮುಖದಲ್ಲಿ ತುಸು ರೌದ್ರಭಾವ! ಅಷ್ಟೇ ಅಲ್ಲ, ದೇವಿಯ ಎರಡೂ ಮುಖಗಳನ್ನು ಭಕ್ತರು ದರ್ಶನ ಮಾಡಿಕೊಳ್ಳಲು ಅನುಕೂಲವಾಗುವಂತೆ ದೇವಸ್ಥಾನಕ್ಕೆ ಎರಡೂ ಕಡೆ ಬಾಗಿಲುಗಳು. ಇಂತಹ ಅಪರೂಪದ ಶಿಲ್ಪವೊಂದು ನಮ್ಮ ಉತ್ತರ ಕನ್ನಡದ ಗೇರುಸೊಪ್ಪದ ಪರಿಸರದಲ್ಲಿದೆ ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ.

ಶರಾವತಿ ನದಿಯ ಹಸಿರು ಕಣಿವೆಯ ನಡುವೆ, ದಟ್ಟ ಕಾಡು, ಬೆಟ್ಟಗಳ ಸಾಲು, ನೀರಿನ ಹರಿವು ಮತ್ತು ಮಲೆನಾಡಿನ ಮಂಜಿನೊಂದಿಗೆ ತನ್ನದೇ ಆದ ನಿಗೂಢ ಸೌಂದರ್ಯವನ್ನು ಹೊತ್ತಿರುವ ಪ್ರದೇಶ ಗೇರುಸೊಪ್ಪ. ಇತಿಹಾಸದ ಪುಟಗಳಲ್ಲಿ ಜೈನ ರಾಣಿ ಚೆನ್ನಭೈರಾದೇವಿಯ ಆಳ್ವಿಕೆಯಿಂದ ಗುರುತಿಸಿಕೊಂಡಿರುವ ಈ ನೆಲ, ಪ್ರಕೃತಿ ಮತ್ತು ಪುರಾತನ ನೆನಪುಗಳನ್ನು ಒಟ್ಟಿಗೆ ಹೊತ್ತಿರುವ ತಾಣವೂ ಹೌದು. ಇದೇ ಪರಿಸರದಲ್ಲಿ ಕಾಣಸಿಗುವ ದ್ವಿಮುಖ ಚಾಮುಂಡಿಯ ಶಿಲ್ಪ ಕುತೂಹಲ ಮೂಡಿಸುತ್ತದೆ.

ಸ್ಥಳಪುರಾಣದ ಪ್ರಕಾರ, ಮಹಾತ್ಮಾ ಗಾಂಧಿ ಜಲವಿದ್ಯುತ್ ಯೋಜನೆ ನಿರ್ಮಾಣದ ಸಂದರ್ಭದಲ್ಲಿ ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಹಾಗೂ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರು ಜೋಗದ ಎತ್ತರ ಪ್ರದೇಶದಲ್ಲಿದ್ದ ದೊಡ್ಡ ಬಂಡೆಯೊಂದರ ಮೇಲೆ ಕುಳಿತು ಹಿರೇಭಾಸ್ಕರ ಅಣೆಕಟ್ಟು ಮತ್ತು ವಿದ್ಯುದಾಗಾರ ನಿರ್ಮಾಣದ ಕುರಿತು ಚರ್ಚಿಸಿದ್ದರು. ಬಳಿಕ ಆ ಬಂಡೆ ‘ರಾಜ ಕಲ್ಲು’ ಎಂದು ಪ್ರಸಿದ್ಧಿಯಾಯಿತು ಎನ್ನಲಾಗುತ್ತದೆ.

ಚಾಮುಂಡಿ ಆರಾಧಕರಾಗಿದ್ದ ಮಹಾರಾಜರಿಗೆ ಒಂದು ರಾತ್ರಿ ಕನಸಿನಲ್ಲಿ ದೇವಿ ಕಾಣಿಸಿಕೊಂಡು, ಜಲಾಶಯದ ನೀರಿನಲ್ಲಿ ತಾನು ಮುಳುಗಿದ್ದೇನೆ. ತನ್ನ ವಿಗ್ರಹಕ್ಕೆ ಯಾವುದೇ ಹಾನಿಯಾಗದಂತೆ ಹೊರತೆಗೆದು ಮೇಲ್ಭಾಗದಲ್ಲಿ ಗುಡಿ ನಿರ್ಮಿಸಿ ಪೂಜೆಯ ವ್ಯವಸ್ಥೆ ಮಾಡುವಂತೆ ಸೂಚಿಸಿದಳು ಎಂಬ ಉಲ್ಲೇಖಗಳಿವೆ.

ಅದರಂತೆ ನೀರಿನಲ್ಲಿ ಹುಡುಕಾಟ ನಡೆಸಿದಾಗ ದೇವಿಯ ವಿಗ್ರಹ ಪತ್ತೆಯಾಯಿತು. ವಿಗ್ರಹವನ್ನು ಮೇಲೆತ್ತಿದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಒಂದೇ ಶಿಲೆಯಲ್ಲಿ ಹಿಂದೆ–ಮುಂದೆ ಎರಡೂ ಕಡೆ ದೇವಿಯ ರೂಪ! ಒಂದು ಮುಖ ಸೌಮ್ಯ, ಮತ್ತೊಂದು ಮುಖ ರೌದ್ರ. ವಿಗ್ರಹವನ್ನು ಸ್ವಚ್ಛಗೊಳಿಸಿ ಅಲ್ಲಿಯೇ ಪೂಜೆ ಸಲ್ಲಿಸಿ, ಬಳಿಕ ಮೇಲ್ಭಾಗದಲ್ಲಿ ಸಣ್ಣ ಗುಡಿ ನಿರ್ಮಿಸಿ ಆರಾಧನೆ ಆರಂಭಿಸಲಾಯಿತು ಎಂಬ ಐತಿಹ್ಯವಿದೆ.

ಕೆಲವು ವರ್ಷಗಳ ಬಳಿಕ ಶರಾವತಿ ವಿದ್ಯುತ್ ಯೋಜನೆಯ ಕಾಮಗಾರಿಗಳ ಸಂದರ್ಭದಲ್ಲಿ ಪದೇಪದೇ ವಿಘ್ನಗಳು ಎದುರಾದವು. ಆಗ ದೇವಿಯ ಗುಡಿ ಸೂಕ್ತವಾಗಿಲ್ಲ ಎಂಬುದು ಮುಖ್ಯ ಅಭಿಯಂತರರಿಗೆ ದೇವೀ ಪ್ರೇರಣೆಯಾಗಿ ತಿಳಿದು, ಕೆಪಿಸಿ ಸಿಬ್ಬಂದಿ ವಂತಿಗೆ ಸಂಗ್ರಹಿಸಿ ಈಗಿರುವ ದೇವಸ್ಥಾನ ನಿರ್ಮಿಸಿ ದೇವಿಯ ಪುನರ್ ಪ್ರತಿಷ್ಠೆ ನೆರವೇರಿಸಿದರು ಎಂಬುದು ಸ್ಥಳೀಯರ ನಂಬಿಕೆ.

ನಂತರ ದೇವಸ್ಥಾನದ ಆಡಳಿತಕ್ಕಾಗಿ ಸಮಿತಿ ರಚಿಸಲಾಯಿತು. ಇಂದಿಗೂ ಸಮಿತಿಯ ಮೂಲಕ ದೇವಸ್ಥಾನದ ನಿರ್ವಹಣೆ ನಡೆಯುತ್ತಿದೆ. ವರ್ಷಕ್ಕೊಮ್ಮೆ ಶತಚಂಡಿಯಾಗ, ವರ್ಧಂತ್ಯುತ್ಸವ, ನವರಾತ್ರಿ ಸೇರಿದಂತೆ ವಿವಿಧ ಹಬ್ಬಹರಿದಿನಗಳಲ್ಲಿ ವಿಶೇಷ ಪೂಜೆ, ಚಂಡಿಹೋಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ಗೇರುಸೊಪ್ಪದ ಹಸಿರಿನ ನಡುವೆ, ಶರಾವತಿಯ ನೆನಪುಗಳನ್ನು ಹೊತ್ತು ನಿಂತಿರುವ ಈ ದ್ವಿಮುಖ ಚಾಮುಂಡಿಯ ಕಥೆಯಲ್ಲಿ ಪುರಾಣವಿದೆ, ಇತಿಹಾಸವಿದೆ, ಶಿಲ್ಪಕಲೆಯ ಅಚ್ಚರಿಯಿದೆ. ನಂಬಿಕೆ ಬೇರೆ, ಇತಿಹಾಸದ ದಾಖಲೆ ಬೇರೆ. ಆದರೆ ಒಂದೇ ಶಿಲೆಯಲ್ಲಿ ದೇವಿಯ ಎರಡು ಭಾವಗಳನ್ನು ಕೆತ್ತಿರುವ ಆ ಕಲಾಕೃತಿ ಮಾತ್ರ ನೋಡಿದವರ ಮನಸ್ಸಿನಲ್ಲಿ ಬಹುಕಾಲ ಉಳಿಯುವಂತಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share