Friday, October 23, 2026
HomeLocal Newsಕಳಚೆ ಸೊಸೈಟಿ; ಲೆಕ್ಕಪತ್ರದ ಗೊಂದಲಕ್ಕೆ ಸಂಘದ ಸುದೀರ್ಘ ಸ್ಪಷ್ಟೀಕರಣ

ಕಳಚೆ ಸೊಸೈಟಿ; ಲೆಕ್ಕಪತ್ರದ ಗೊಂದಲಕ್ಕೆ ಸಂಘದ ಸುದೀರ್ಘ ಸ್ಪಷ್ಟೀಕರಣ

ಯಲ್ಲಾಪುರ: 2025-26ನೇ ಸಾಲಿನ ಲೆಕ್ಕಪತ್ರದಲ್ಲಿ ಆಡಳಿತ ಮಂಡಳಿಯ ಐವರು ಸದಸ್ಯರು ದೃಢೀಕರಣ ಪತ್ರವಿಲ್ಲದೇ ಮೊತ್ತವನ್ನು ನಮೂದಿಸಿರುವ ಕುರಿತು ತನಿಖೆ ನಡೆಸುವಂತೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ, ಬೆಂಗಳೂರಿಗೆ ಮನವಿ ಸಲ್ಲಿಸಿರುವ ಬಗ್ಗೆ ಕೆನರಾ ನೆಕ್ಸ್ಟ್‌ ಸೇರಿದಂತೆ ಕೆಲ ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಘವು ಸ್ಪಷ್ಟೀಕರಣ ನೀಡಿದೆ.

ಸಾರ್ವಜನಿಕರು ಸಂಘದ ಮೇಲೆ ಹೊಂದಿರುವ ವಿಶ್ವಾಸದ ಕಾರಣದಿಂದ ಯಲ್ಲಾಪುರ ಪಟ್ಟಣದಲ್ಲಿ ಶಾಖೆ, ಎಪಿಎಂಸಿಯಲ್ಲಿ ಅಡಿಕೆ ದಲಾಲಿ ಸಹಿತ ಶಾಖೆ ಹಾಗೂ ಜೋಯಿಡಾದಲ್ಲಿ ವ್ಯಾಪಾರ ಕೇಂದ್ರವನ್ನು ನಡೆಸಲು ಸಾಧ್ಯವಾಗಿದೆ.

ಆಡಳಿತ ಮಂಡಳಿಯ ಕೆಲವು ಸದಸ್ಯರು ಪ್ರಸ್ತಾಪಿಸಿರುವ ವಿಚಾರ ಈ ವರ್ಷ ಹೊಸದಾಗಿ ಉದ್ಭವಿಸಿರುವುದಲ್ಲ. ಈ ವಿಷಯ ಹಿಂದಿನಿಂದಲೂ ಇದ್ದು, ಆ ಸಂದರ್ಭದಲ್ಲಿ ಈ ನಿರ್ದೇಶಕರುಗಳು ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ. ಬರತಕ್ಕ ಬಡ್ಡಿಯ ಮೊತ್ತಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬರಬೇಕಿದ್ದು, ಈ ಕುರಿತು 2016ರಿಂದಲೂ ಕೆಡಿಸಿಸಿ ಬ್ಯಾಂಕ್‌ಗೆ ಪತ್ರ ವ್ಯವಹಾರ ನಡೆಸಲಾಗುತ್ತಿದೆ. ಬ್ಯಾಂಕ್ ಅಧಿಕಾರಿಗಳನ್ನು ಮುಖತಃ ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಲಾಗಿದೆ. ಈ ವಿಚಾರಗಳು ಸಂಘದ ಸದಸ್ಯರಿಗೂ ತಿಳಿದಿವೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಘದ ಪ್ರಕಟಣೆಯಲ್ಲಿ 2016ರಿಂದ ನಡೆದಿರುವ ಪ್ರಕ್ರಿಯೆಗಳನ್ನೂ ವಿವರಿಸಲಾಗಿದೆ. 2016ರ ಜ.16ರಂದು ಸಹಾಯಕ ನಿಬಂಧಕರು ಸಂಘದ ಮೇಲೆ ಸಹಕಾರ ಕಾಯ್ದೆಯ ಕಲಂ 64ರ ಅಡಿಯಲ್ಲಿ ತನಿಖೆಗೆ ಆದೇಶಿಸಿದ್ದರು. ವಿಚಾರಣಾಧಿಕಾರಿಗಳು ಮೇ 31, 2016ರಂದು ವರದಿ ಸಲ್ಲಿಸಿದ್ದು, ಅದರಂತೆ ಅನುಪಾಲನಾ ವರದಿಯನ್ನು ಇಲಾಖೆಗೆ ಸಲ್ಲಿಸಲಾಗಿದೆ ಎಂದು ಸಂಘ ತಿಳಿಸಿದೆ.

ನಂತರ 2017ರ ಆ.8ರಂದು ಸಹಾಯಕ ನಿಬಂಧಕರು ಸಂಘದ ಮೇಲೆ ಕಲಂ 65(ಬಿ) ಅಡಿಯಲ್ಲಿ ತನಿಖೆಗೆ ಆದೇಶಿಸಿದ್ದರು. ಕೆಡಿಸಿಸಿ ಬ್ಯಾಂಕ್‌ನ ಸಿಬ್ಬಂದಿ 2002-03ರಿಂದ 2016ರವರೆಗಿನ ಬಡ್ಡಿ ರಿಯಾಯಿತಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದರು. ಅದರಂತೆ ಸೂಕ್ತ ಹೊಂದಾಣಿಕೆ ಜಮಾ-ಖರ್ಚು ಮಾಡಲು ನೀಡಿದ ನಿರ್ದೇಶನವನ್ನು ಸಂಘ ಅನುಪಾಲಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೆಡಿಸಿಸಿ ಬ್ಯಾಂಕ್‌ನ ನಿರ್ದೇಶನದಂತೆ ಸೂಕ್ತ ಜಮಾ-ಖರ್ಚು ಮಾಡಿಕೊಂಡ ಬಳಿಕ, ಸಂಬಂಧಿಸಿದ ಮೊತ್ತ ಸರ್ಕಾರಗಳಿಂದ ಬರಬೇಕಿದೆ. ಪ್ರತಿವರ್ಷ ದೃಢೀಕರಣ ಪತ್ರ ನೀಡುವಂತೆ ಕೆಡಿಸಿಸಿ ಬ್ಯಾಂಕ್‌ಗೆ ಪತ್ರ ವ್ಯವಹಾರ ನಡೆಸಲಾಗುತ್ತಿದ್ದು, ಇದುವರೆಗೆ ಬ್ಯಾಂಕ್‌ನಿಂದ ಯಾವುದೇ ದೃಢೀಕರಣ ಪತ್ರ ಬಂದಿಲ್ಲ ಎಂದು ಸಂಘ ಹೇಳಿದೆ.

ಆದರೆ ಕೆಡಿಸಿಸಿ ಬ್ಯಾಂಕ್‌ನ ಮೇಲ್ವಿಚಾರಕರು 2024ರ ಜ.1ರಿಂದ ಮಾ.31ರವರೆಗಿನ ತ್ರೈಮಾಸಿಕ ಮೇಲ್ವಿಚಾರಣಾ ವರದಿಯನ್ನು 2026ರ ಜ.19ರಂದು ಸಂಘಕ್ಕೆ ನೀಡಿದ್ದು, ಈ ಅಂಶಗಳಿಗೆ ಸಂಬಂಧಿಸಿದಂತೆ ಸೂಕ್ತ ಹೊಂದಾಣಿಕೆ ಜಮಾ-ಖರ್ಚು ಮಾಡಿಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಸಂಘದ ಆಡಳಿತ ಮಂಡಳಿಯು 2026ರ ಫೆ.16ರಂದು ನಡೆದ ಸಭೆಯಲ್ಲಿ ನಿರ್ಣಯ 09(01)ರ ಪ್ರಕಾರ ವರದಿಯನ್ನು ಪರಿಶೀಲಿಸಿ ಚರ್ಚಿಸಿ, ಅನುವು ಕಾಯ್ದಿರಿಸಲು ಸರ್ವಾನುಮತದ ನಿರ್ಣಯ ಕೈಗೊಂಡಿತ್ತು.

ತದನಂತರ ಮಾ.26, 2026ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯವನ್ನು ದೃಢೀಕರಿಸುವ ಸಂದರ್ಭದಲ್ಲಿ ಕೆಲವು ನಿರ್ದೇಶಕರು ತಮ್ಮ ಅಭಿಪ್ರಾಯಗಳನ್ನು ದಾಖಲಿಸುವಂತೆ ಪತ್ರ ನೀಡಿದ್ದರು. ಆ ನಿರ್ದೇಶಕರ ಅಭಿಪ್ರಾಯಗಳನ್ನು ಸಭೆಯ ಠರಾವಿನಲ್ಲಿಯೂ ದಾಖಲಿಸಲಾಗಿದೆ ಎಂದು ಸಂಘ ತಿಳಿಸಿದೆ.

ಇದೇ ವಿಷಯವು ಆ.26, 2026ರಂದು ನಡೆದ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿಯೂ ಪ್ರಸ್ತಾಪವಾಗಿತ್ತು. ಸಭೆಯಲ್ಲಿ ವಿಷಯವನ್ನು ಚರ್ಚಿಸಿದ ಸದಸ್ಯರು, ಅನುವು ತೆಗೆದಿರಿಸಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಸಂಬಂಧಿಸಿದ ಮೊತ್ತವನ್ನು ಹೊಂದಾಣಿಕೆ ಜಮಾ-ಖರ್ಚು ಮಾಡಲು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ ಎಂದು ಸಂಘ ಹೇಳಿದೆ.

ಸಂಘವು ಪ್ರತಿಯೊಂದು ಸಂದರ್ಭದಲ್ಲಿಯೂ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ನ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದು, ಈ ವಿಚಾರದಲ್ಲಿ ಸದಸ್ಯರು ಆತಂಕಪಡಬೇಕಾಗಿಲ್ಲ. ಜಿಲ್ಲೆಯ ಹಲವಾರು ಸಹಕಾರ ಸಂಘಗಳು ಈ ಸಂಬಂಧ ಅನುವು ತೆಗೆದಿದ್ದು, ಕೆಲವು ಸಂಘಗಳು ಈಗಾಗಲೇ ಹೊಂದಾಣಿಕೆ ಜಮಾ-ಖರ್ಚು ಮಾಡಿಕೊಂಡಿವೆ ಎಂದು ತಿಳಿಸಲಾಗಿದೆ.

ಸಂಘದ ಆರ್ಥಿಕ ಹಿತದೃಷ್ಟಿಯಿಂದ ಅನುವು ಕಲ್ಪಿಸಲಾಗಿದೆಯೇ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸಂಘ ಸ್ಪಷ್ಟಪಡಿಸಿದೆ. ಕೆಡಿಸಿಸಿ ಬ್ಯಾಂಕ್‌ನಿಂದ ಬರತಕ್ಕ ಬಡ್ಡಿಯ ಒಟ್ಟು ಮೊತ್ತದಲ್ಲಿ ರೂ.12,26,564 ರಿಜರ್ವ್ ಫಂಡ್ ಬಡ್ಡಿಯಾಗಿದ್ದು, ಉಳಿದ ರೂ.6,28,110 ಮಾರ್ಚ್ ಅಂತ್ಯಕ್ಕೆ ಕೆಡಿಸಿಸಿ ಬ್ಯಾಂಕ್‌ನಲ್ಲಿ ಗುಂತಾಯಿಸಿದ ಠೇವಣಿಗಳ ಮೇಲೆ ಕಾಯ್ದಿರಿಸಿದ ಬಡ್ಡಿಯಾಗಿದೆ ಎಂದು ತಿಳಿಸಿದೆ.

ಈ ಪೈಕಿ ರಿಜರ್ವ್ ಫಂಡ್ ಬಡ್ಡಿಯ ರೂ.12,26,564 ಮೊತ್ತವು 2026ರ ಏ.4ರಂದು ಜಮಾ ಆಗಿದೆ. ಸಂಘವು ಪ್ರಾಮಾಣಿಕವಾಗಿ ವ್ಯವಹರಿಸುತ್ತಿದ್ದು, ಸದಸ್ಯರು, ಗ್ರಾಹಕರು ಹಾಗೂ ಹಿತೈಷಿಗಳು ಈ ವಿಚಾರದಲ್ಲಿ ಆತಂಕಪಡಬೇಕಾಗಿಲ್ಲ. ಎಲ್ಲರ ಸಹಕಾರದೊಂದಿಗೆ ಸಂಘವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಸಂಘದ ಆಡಳಿತ ಮಂಡಳಿ ಸ್ಪಷ್ಟೀಕರಣದಲ್ಲಿ ತಿಳಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share