ಯಲ್ಲಾಪುರ: ತಾಲೂಕಿನ ಗುಳ್ಳಾಪುರ ಗ್ರಾಮದ ವಿದ್ಯಾರ್ಥಿನಿ ಧನ್ಯಾ ಜಿ.ಬಿ ವಿದ್ಯಾರ್ಥಿ ದಿಸೆಯಲ್ಲೇ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದು, ಇವಳನ್ನು ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ವತಿಯಿಂದ ನೀಡಲಾಗುವ ಪ್ರತಿಷ್ಠಿತ “ಹವ್ಯಕ ಪಲ್ಲವ ಪ್ರಶಸ್ತಿ”ಗೆ ಆಯ್ಕೆ ಮಾಡಲಾಗಿದೆ.
ಯಕ್ಷಗಾನ, ಕೀರ್ತನೆ, ಕೊಳಲು ವಾದನ, ಭಾಷಣ, ವಿಜ್ಞಾನ ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಧನ್ಯಾ ತನ್ನ ಪ್ರತಿಭೆಯನ್ನು ತೋರಿದ್ದಾಳೆ. ಅಧ್ಯಯನದ ಜೊತೆಗೆ ರಾಜ್ಯಮಟ್ಟದ ಸಂಸ್ಕೃತ ಭಾಷಣ ಸ್ಪರ್ಧೆಗಳಲ್ಲಿ ಎರಡು ವರ್ಷಗಳ ಕಾಲ ಭಾಗವಹಿಸಿರುವ ಧನ್ಯಾ, 2024-25ರಲ್ಲಿ ನಡೆದ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿ ಹಾಗೂ ಉತ್ತಮ ನಟಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾಳೆ.
ಪ್ರಸ್ತುತ ಧನ್ಯಾ ಗೋಕರ್ಣದ ಸಾರ್ವಭೌಮ ಗುರುಕುಲದಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದು, ಅವಳ ಸಾಧನೆಗೆ ಇದೀಗ ಮತ್ತೊಂದು ಗೌರವ ದೊರೆಯುತ್ತಿದೆ. ಮಾರ್ಚ್ 29ರಂದು ಬೆಂಗಳೂರಿನಲ್ಲಿ ನಡೆಯುವ ಹವ್ಯಕ ಮಹಾಸಭೆಯ 83ನೇ ಸಂಸ್ಥಾನೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಗುಳ್ಳಾಪುರದ ಜಿ.ಆರ್. ಭಟ್ ಮತ್ತು ಸಂಧ್ಯಾ ದಂಪತಿಯ ಪುತ್ರಿಯಾಗಿರುವ ಧನ್ಯಾಳ ಸಾಧನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.